ಕಲಬುರಗಿ: ಹಿಂಗಾರು ಹಂಗಾಮಿನ ಮಳೆಗಳೆಲ್ಲ ಮುಗಿದಿದ್ದು, ಅಕಾಲಿಕವಾಗಿ ಅದರಲ್ಲೂ ವಾಯುಭಾರ ಕುಸಿತದಿಂದ ಎದುರಾಗಿರುವ ಮಳೆಗೆ ಬಿಸಿಲು ನಾಡು ತತ್ತರಿಸಿದ್ದು, ಅಳಿದುಳಿದ ವಾಣಿಜ್ಯ ಬೆಳೆ ತೊಗರಿ ಮತ್ತಷ್ಟು ನಷ್ಟ ಹೊಂದುವಂತಾಗಿದೆ.
ಹಿಂಗಾರಿನ ಕೊನೆ ಮಳೆ ವಿಶಾಖ ಮಳೆ ಎರಡು ದಿನದ ಹಿಂದೆಯಷ್ಟೇ ಮುಗಿದಿದ್ದು, ಈಗ ಯಾವುದೇ ಮಳೆಯಿಲ್ಲ. ಮಳೆಗಳೆಲ್ಲ ಮುಗಿದ ನಂತರ ನವೆಂಬರ್ ತಿಂಗಳಲ್ಲಿ ಮಳೆ ಬಂದಿರುವುದೇ ಅಪರೂಪ. ಒಂದು ವೇಳೆ ಬಂದರೂ ಧಾರಾಕಾರ ಮಳೆ ಸುರಿದಿಲ್ಲ. ಆದರೆ ರವಿವಾರ ಮೋಡ ಕವಿದ ವಾತಾವರಣ ನಡುವೆ ಧಾರಾಕಾರ ಮಳೆ ಸುರಿದಿದೆ.
ಮಳೆಗೆ ಜೋಳ, ಕಡಲೆ ಸಹ ನೀರಲ್ಲಿ ನಿಲ್ಲುವಂತಾಗಿದೆ. ಕಲಬುರಗಿ ಮಹಾನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಒಟ್ಟಾರೆ ರವಿವಾರ ದಿನವಿಡಿ ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಜನ ತೊಂದರೆಗೆ ಒಳಗಾಗಿದ್ದು ಕಂಡು ಬಂತು. ಅತಿವೃಷ್ಟಿಯಿಂದ ಈಗಾಗಲೇ ಅರ್ಧಕ್ಕಿಂತ ಹೆಚ್ಚಿನ ಭೂಮಿಯ ತೊಗರಿ ಬೆಳೆ ನೆಟೆರೋಗಕ್ಕೆ ತುತ್ತಾಗಿದೆ.
ವಿಪರ್ಯಾಸವೆಂದರೆ ಎರಡ್ಮೂರು ಸಲ ಕೀಟನಾಶಕ ಸಿಂಪಡಣೆ ಮಾಡಿದ ಮೇಲೆ ತೊಗರಿ ಬೆಳೆ ಒಣಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇನ್ನೂ ಎರಡ್ಮೂರು ವಾರ ಕಾಯ್ದರೆ ತೊಗರಿ ಕಟಾವಿಗೆ ಬರುತ್ತದೆ. ಆದರೆ ಅಕಾಲಿಕ ಮಳೆಗೆ ತೊಗರಿ ಸಂಪೂರ್ಣ ನಾಶವಾಗುವಂತಾಗಿದೆ.
ತೊಗರಿ ಹೂವು ಬಾಡಿದ್ದರೆ, ಕಾಯಿ ಹಿಡಿದಿದ್ದ ತೊಗರಿ ನೆಟೆರೋಗಕ್ಕೆ ಒಳಗಾಗಿದೆ. ಉಳಿದಂತೆ ಕಡಲೆ, ಜೋಳಕ್ಕೆ ಮಳೆ ಸ್ವಲ್ಪ ಅನುಕೂಲವಾಗಿದೆ ಎನ್ನಬಹುದು. ಮಳೆ ಇನ್ನಷ್ಟು ಬಂದರೆ ಜೋಳಕ್ಕೂ ಕುತ್ತಾಗುತ್ತದೆ. ಅಕಾಲಿಕ ಮಳೆಯಿಂದ ಜನರು ಸಹ ತೊಂದರೆಗೆ ಒಳಗಾಗಿದ್ದಾರೆ. ಶೀತ ಗಾಳಿಯಿಂದ ಹಲವರು ರೋಗಗಳಿಗೆ ಒಳಗಾಗುವಂತೆ ಮಾಡಿದೆ. ಒಟ್ಟಾರೆ ಈ ಅಕಾಲಿಕ ಮಳೆ ಹಲವಾರು ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೊಂದೆಡೆ ಮಳೆ ಬಂದರೆ ತರಕಾರಿ ಬೆಲೆ ಕಡಿಮೆಯಾಗಬೇಕು. ಆದರೆ ದಿನೇ-ದಿನೇ ಬೆಲೆ ಹೆಚ್ಚಳವಾಗುತ್ತಿದೆ ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.