ಹುಣಸೂರು: ರಾಜ್ಯಾದ್ಯಂತ ಸುರಿಯುತ್ತಿರುವ ಜಡಿ ಮಳೆಗೆ ಹುಣಸೂರು ನಗರದಲ್ಲಿ ಬಹುತೇಕ ಮನೆಗಳು ಜಲಾವೃತಗೊಂಡಿದ್ದು, ಕಾರು, ಬೈಕ್ ಗಳು ಜಖಂಗೊಂಡಿದೆ.
ಮಂಗಳವಾರ ಮದ್ಯರಾತ್ರಿಯಿಂದ ಬೆಳಗಿನವರೆಗೆ ಸುರಿದ ಧಾರಾಕಾರ ಮಳೆಗೆ ಹುಣಸೂರು ನ್ಯಾಯಾಲಯ ಆವರಣ, ತೋಟಗಾರಿಕೆ ಇಲಾಖೆ, ಮಂಜುನಾಥ ಬಡಾವಣೆ, ಸಾಕೇತ ಬಡಾವಣೆ, ನ್ಯೂ ಮಾರುತಿ ಬಡಾವಣೆಗಳಲ್ಲಿ, ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಮನೆಯೊಳಗಿದ್ದ ಸಾಮಾಗ್ರಿಗಳು ನೀರಿನಲ್ಲಿ ಮುಳುಗಿವೆ. ಶಬ್ಬೀರ್ ನಗರ, ಕಿರಿಜಾಜಿ ರಸ್ತೆಯ ಸಂಪರ್ಕ ಕಡಿತಗೊಂಡಿದೆ.
ನೀರು ನುಗ್ಗಿದ ಸ್ಥಳಗಳಲ್ಲಿ ನೀರನ್ನು ಹೊರತೆಗೆಯಲು ಅಗ್ನಿಶಾಮಕ ಸಿಬಂದಿ ಹರಸಾಹಸ ಪಡುತ್ತಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಚ್.ರಾಜು ಮಾರ್ಗದರ್ಶನದಲ್ಲಿ ಪೌರಾಯುಕ್ತ ರವಿಕುಮಾರ್ , ನಗರ ಠಾಣೆ ಇನ್ಸ್ಫೆಕ್ಟರ್ ಶ್ರೀನಿವಾಸ್ ಹುಣಸೂರು ಅಗ್ನಿ ಶಾಮಕ ಅಧಿಕಾರಿ ಸತೀಶ್ ನೇತೃತ್ವದಲ್ಲಿ ನಗರಸಭೆ ಸಿಬಂದಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ನಗರಸಭೆ ಸಿಬಂದಿಗಳು ಬಡಾವಣೆ ನೀರು ಸರಾಗವಾಗಿ ಹರಿದು ಹೋಗಲು ಅಲ್ಳಲ್ಲಿ ತಾತ್ಕಾಲಿಕ ಚರಂಡಿ ನಿರ್ಮಿಸಿದ್ದರೂ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಸಮಸ್ಯೆಯಾಗಿದೆ. ಬೆಳಗ್ಗೆ ಕೆಲಹೊತ್ತು ಬಿಡುವು ನೀಡಿದ್ದ ಮಳೆರಾಯ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದರಿಂದಾಗಿ ಕಾರ್ಯಾಚರಣೆಗೆ ತೊಡಕಾಗಿದೆ.
ವ್ಯಕ್ತಿಯೊರ್ವ ಪೊಲೀಸರಿಗೆ ಕರೆ ಮಾಡಿ ಮನೆಗೆ ನೀರು ನುಗ್ಗಿದೆ. ನೀರಿನಲ್ಲಿ ಮುಳುಗುತ್ತಿದ್ದೇವೆಂದು ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಅವರನ್ನು ರಕ್ಷಿಸಿದ್ದಾರೆ.