ಗದಗ: ಬುಧವಾರ ಮಧ್ಯರಾತ್ರಿಯಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.
ಒಂದು ಕಡೆ ಚರಂಡಿ ನೀರು ಮನೆಗೆ ನುಗ್ಗಿದರೆ, ಇನ್ನೊಂದು ಕಡೆ ರಾಜ ಕಾಲುವೆಯ ನೀರು ಮನೆಗಳಿಗೆ ನುಗ್ಗಿ ಆಹಾರ ಧಾನ್ಯ, ಗೃಹೋಪಯೋಗಿ ವಸ್ತುಗಳು ನೀರಲ್ಲಿ ತೇಲಾಡುತ್ತಿವೆ.
ಗದಗದ ಗಂಗಿಮಡಿ, ಮುಳಗುಂದ ನಾಕಾದ ಕೆಇಬಿ ಬಳಿ ಹಾಗೂ ಬೆಟಗೇರಿಯ ನಾಲ್ಕನೇ ವಾರ್ಡ್ ನ ಮಂಜುನಾಥ್ ನಗರದ ವಾಲ್ಮೀಕಿ ಅಂಬೇಡ್ಕರ್ ಬಡಾವಣೆ ಹಾಗೂ ನರಸಾಪೂರ ಪೆಟ್ರೋಲ್ ಬಂಕ್ ಬಳಿಯ ಮನೆಗಳು ಜಲಾವೃತಗೊಂಡಿದ್ದು, ಮನೆಗಳಿಗೆಲ್ಲ ನೀರು ನುಗ್ಗಿದೆ.
ಇದನ್ನೂ ಓದಿ:3 ವರ್ಷದಲ್ಲಿ 63 ಕೋಮು ಸಂಘರ್ಷ ಪ್ರಕರಣ : 14 ಪ್ರಕರಣದ ಚಾರ್ಜ್‌ಶೀಟ್, 36 ತನಿಖಾ ಹಂತದಲ್ಲಿ
ರಾತ್ರಿ ಮೂರು ಗಂಟೆ ಸಮಾರಿಗೆ ಮನೆಗಳಿಗೆ ಏಕಾಏಕಿ ನುಗ್ಗಿದ ರಾಜ ಕಾಲುವೆಯ ನೀರಿನಿಂದಾಗಿ ಗಾಬರಿಬಿದ್ದ ಜನ ನೀರು ಮನೆಯಿಂದ ಹೊರಗಡೆ ಹಾಕಲು ಹರಸಾಹಸ ನಡೆಸಿದರು. ಇದರಿಂದಾಗಿ ಜನ ಸಂಕಷ್ಟ ಎದುರಿಸುವಂತಾಯಿತು.
ಕಳೆದ ನಾಲ್ಕು ವರ್ಷಗಳ ಹಿಂದೆಯೂ ಇಡೀ ಬಡಾವಣೆಯಲ್ಲಿ ಮೊಳಕಾಲುದ್ದದ ನೀರು ನಿಂತು ಸ್ಥಳಿಯರು ಹೈರಾಣಾಗಿದ್ದರು. ಈಗ ಬುಧವಾರ ಸುರಿದ ಭಾರಿ ಮಳೆಗೆ ಸ್ಥಳೀಯರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.
ನರಸಾಪೂರ ಪೆಟ್ರೋಲ್ ಬಂಕ್ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಜನರಿಗೆ ಆಶ್ರಯ ಒದಗಿಸಲು ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಅವರು ತಮ್ಮದೇ ಆದ ಶಿವರತ್ನ ಕಲ್ಯಾಣ ಮಂಟಪದಲ್ಲಿ ಸ್ಥಳಾವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.