ಗದಗ: ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಯಿತು. ಹುಬ್ಬ ಮಳೆ ನಕ್ಷತ್ರ ಆರಂಭವಾದ ಎರಡೇ ದಿನಗಳಲ್ಲಿ ಮಳೆ ಅಬ್ಬರಿಸಲು ಆರಂಭಿಸಿದೆ. ಜಿಲ್ಲೆಯ ವಿವಿಧೆಡೆ ಕಳೆದ ಮೂರು ದಿನಗಳಿಂದ ಬಿಸಿಲು ಚುರುಕಾಗಿತ್ತು. ಪರಿಣಾಮ ಸೆಖೆಯಿಂದ ತತ್ತರಿಸುವಂತಾಗಿತ್ತು. ಈ ನಡುವೆ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಏಕಾಏಕಿ ಬಿರುಸಿನ ಮಳೆ ಆರಂಭವಾಯಿತು. ಬಳಿಕ ಸಂಜೆವರೆಗೆ ಆಗೊಮ್ಮೆ- ಈಗೊಮ್ಮೆ ಅಬ್ಬರಿಸಿದ್ದ ಮಳೆ, ಸಂಜೆ 7 ಗಂಟೆ ಸುಮಾರಿಗೆ ಮತ್ತೂಮ್ಮೆ ಅಬ್ಬರಿಸಿತು.
ಅವಳಿ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳಲ್ಲಿ ಮಳೆ ನೀರು ನಿಂತು, ಚರಂಡಿ ಹಾಗೂ ರಸ್ತೆಗಳ ನಡುವಿನ ವ್ಯತ್ಯಾಸ ತಿಳಿಯದಂತಾಯಿತು. ಯುಜಿಡಿ ಹಾಗೂ 24×7 ಕುಡಿಯುವ ನೀರಿನ ಕಾಮಗಾರಿಗಳಿಂದಾಗಿ ರಸ್ತೆಗಳೆಲ್ಲ ಹದಗೆಟ್ಟಿವೆ.
ಇದರಿಂದಾಗಿ ತೆಗ್ಗುದಿನ್ನೆಗಳನ್ನು ಗುರುತಿಸಲಾಗದೇ ಸೈಕಲ್ ಹಾಗೂ ದ್ವಿಚಕ್ರ ವಾಹನಗಳ ಸವಾರರು ಪರದಾಡುವಂತಾಯಿತು. ಇನ್ನುಳಿದಂತೆ ಜಿಲ್ಲೆಯ ಮುಂಡರಗಿ, ನರಗುಂದ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.