ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ತಾಲೂಕಿನ ಹಲವೆಡೆ ಶುಕ್ರವಾರ ಸಂಜೆ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಸಿಡಿಲು ಬಡಿದು ಎತ್ತೂಂದು ಮೃತಪಟ್ಟಿದ್ದು, ಅಂಗಡಿ ಮೇಲೆ ಮರ ಉರುಳಿ ಬಿದ್ದರಿಂದ ಮೂವರು ಗಾಯಗೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬಿರುಗಾಳಿ, ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ. ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಬಸವರಾಜ್ ಜೋಗಿನ ಎಂಬುವರಿಗೆ ಸೇರಿದ ಎತ್ತು ಸ್ಥಳದಲ್ಲೇ ಮೃತಪಟ್ಟಿದೆ. ಬಿರುಗಾಳಿಗೆ ಬಣವೆಗಳಲ್ಲಿ ದಾಸ್ತಾನು ಮಾಡಿದ್ದ ಮೇವು ಹಾರಿ ಹೋಗಿವೆ.
ಮುಳಗುಂದ ರಸ್ತೆಯಲ್ಲಿ ಮರವೊಂದು ಹೇರ್ ಕಟಿಂಗ್ ಶಾಪ್ ಮೇಲೆ ಉರುಳಿ ಬಿದ್ದಿದೆ. ಅಂಗಡಿ ಮಾಲೀಕ ವಿನಾಯಕ ಹಡಪದ ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಬೆಳಗ್ಗೆಯಿಂದ ಸೂರ್ಯನ ಪ್ರಖರ ಹೆಚ್ಚಿತ್ತು. ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡ ತುಂತುರು ಮಳೆ ಬಳಿಕ ಬಿರುಸುಗೊಂಡಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ನಗರ ವಾಸಿಗಳು ಪರದಾಡುವಂತಾಯಿತು. ಅವಳಿ ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಅಲ್ಲಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರು ಪರದಾಡಿದರು. ಇನ್ನುಳಿದಂತೆ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಮಾರುಕಟ್ಟೆಗೆ ಬರುತ್ತಿದ್ದ ಜನರು ಮಳೆಯಿಂದ ರಕ್ಷಣೆ ಪಡೆಯಲು ವಾಣಿಜ್ಯ ಮಳಿಗೆಗಳು, ಮರಗಳ ಬುಡದಲ್ಲಿ ನಿಂತರು. ಮಧ್ಯಾಹ್ನ ಸುರಿದ ಮಳೆಯಿಂದಾಗಿ ರಾತ್ರಿ ವೇಳೆ ವಾತಾವರಣದಲ್ಲಿ ತಂಪಿತ್ತು.