Advertisement

ಕರಾವಳಿಯಲ್ಲಿ ಮಳೆ-ಅಲೆಯ ಅಬ್ಬರ

09:54 AM Oct 27, 2019 | Team Udayavani |

ಮಂಗಳೂರು/ಉಡುಪಿ: ಅರಬಿ ಸಮುದ್ರದಲ್ಲಿ ಸೃಷ್ಟಿಯಾದ “ಕ್ಯಾರ್‌’ ಚಂಡಮಾರುತದ ಪ್ರಭಾವದಿಂದ ಕರಾವಳಿ ಭಾಗಗಳಲ್ಲಿ ಶುಕ್ರವಾರವೂ ಉತ್ತಮ ಮಳೆಯಾಗಿದೆ. ಹಲವೆಡೆ ಹಾನಿ ಸಂಭವಿಸಿದೆ. ಕುಕ್ಕೆಹಳ್ಳಿಯಲ್ಲಿ ಮರ ಉರುಳಿ ವ್ಯಕ್ತಿಯೋ ರ್ವರು ಮೃತಪಟ್ಟಿದ್ದಾರೆ. ಸಮುದ್ರದ ಅಲೆಗಳ ಅಬ್ಬರವೂ ತೀವ್ರಗೊಂಡಿದೆ. ಭಾರೀ ಮಳೆಯ ಕಾರಣ ದ.ಕ. ಮತ್ತು ಉಡುಪಿ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಲಾಗಿದೆ.

Advertisement

ಮಂಗಳೂರು ನಗರದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಕಡೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಚಂಡಮಾರುತದ ಹಿನ್ನೆಲೆಯಲ್ಲಿ ಕಡಲಿನಲ್ಲಿ ಅಲೆಗಳ ಅಬ್ಬರ ಕೂಡ ಹೆಚ್ಚಿತ್ತು. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಹಲವಾರು ಬೋಟ್‌ಗಳು ಚಂಡಮಾರುತದ ಹಿನ್ನೆಲೆಯಲ್ಲಿ ವಾಪಸ್‌ ಬಂದಿದ್ದು, ಮಂಗಳೂರು ಧಕ್ಕೆಯಲ್ಲಿ ಸಮುದ್ರದ ಅಬ್ಬರ ಜೋರಾಗಿರುವ ಕಾರಣಕ್ಕೆ ಎನ್‌ಎಂಪಿಟಿ ಹಾಗೂ
ಕಾರವಾರ ಬಂದರಿಗೆ ತೆರಳಿವೆ.

“ಕ್ಯಾರ್‌’ ಹೆಸರಿನ ಚಂಡಮಾರುತ ಸದ್ಯ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕೇಂದ್ರೀಕೃತವಾಗಿದ್ದು, ಸದ್ಯದ ಲೆಕ್ಕಾಚಾರ ಪ್ರಕಾರ ಒಮಾನ್‌ ಕಡೆಗೆ ಚಲಿಸುತ್ತಿದೆ. ಒಂದೆರಡು ದಿನಗಳಲ್ಲಿ ಈ ಚಂಡಮಾರುತವು ಮತ್ತಷ್ಟು ಪ್ರಬಲಗೊಳ್ಳಲಿದ್ದು, ಸುಮಾರು 100 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಶನಿವಾರ ಕರಾವಳಿ ಕರ್ನಾಟಕದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ದಿಡುಪೆ: ನದಿ ನೀರು ಏರಿಕೆ
ಬೆಳ್ತಂಗಡಿ: ದಿಡುಪೆ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನದಿ ನೀರು ಏರಿಕೆಯಾದ ಪರಿಣಾಮ ಸ್ಥಳೀಯರು ಆತಂಕಕ್ಕೀಡಾದರು. ಭೀತರಾದ ದಿಡುಪೆ ದಡ್ಡು ಪ್ರದೇಶದ ಸುಮಾರು 5 ಕುಟುಂಬ ಮನೆ ಬಿಟ್ಟು ತೆರಳಿರು
ವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಚಾರ್ಮಾಡಿ, ಚಿಕ್ಕಮಗಳೂರು ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಆತಂಕ ಎದುರಾಗಿದೆ. ಭತ್ತದ ಗದ್ದೆಗಳಿಗೆ ಹಾನಿ ಗಾಳಿ-ಮಳೆಯಿಂದಾಗಿ ಉಡುಪಿ ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ತೆಕ್ಕಟ್ಟೆ ಪರಿಸರದಲ್ಲಿ ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿದ್ದು, ಕೃಷಿಕರು ಆತಂಕಕ್ಕೀಡಾಗಿದ್ದಾರೆ. ಪಡುಬಿದ್ರಿ ಮಧ್ವ ನಗರ ನಳಿನಿ ದೇವಾಡಿಗ ಅವರ ಮನೆಯ ಹೆಂಚು ಹಾರಿ 15,000 ರೂ. ಅಳಿವೆಕೋಡಿ ರೇವತಿ ಶೆಟ್ಟಿ ಮನೆ ಮಹಡಿ ಕುಸಿದು 50,000 ರೂ., ಪೂಂದಾಡು ಪದ್ಮ
ಬಂಗೇರ ಮನೆಗೆ ಭಾಗಶಃ ಹಾನಿಯಾಗಿ 25,000 ರೂ. ನಷ್ಟ ಉಂಟಾಗಿದೆ.

Advertisement

ಬೋಟ್‌ ಅಪಾಯದಲ್ಲಿ
ಉಳ್ಳಾಲದ ಸಹೀಬುದ್ದೀನ್‌ ಯು.ಎಸ್‌. ಅವರಿಗೆ ಸೇರಿದ “ಎಂ.ಎ. ಮಹೀಲ್‌’ ಬೋಟ್‌ ತಾಂತ್ರಿಕ ತೊಂದರೆಯಿಂದಾಗಿ ಕಾರವಾರದಲ್ಲಿ ಶುಕ್ರವಾರ ಸಂಜೆ ವೇಳೆಗೆ ಸಿಲುಕಿಕೊಂಡಿದ್ದು, 10 ಮಂದಿ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮಂಗಳೂರು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರು ಕೋಸ್ಟ್‌ ಗಾರ್ಡ್‌ಗೆ ಮೀನುಗಾರರನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಉದಯವಾಣಿ ಜತೆ ಮಾತನಾಡಿದ ಬೋಟು ಮಾಲಕ ಸಹೀಬುದ್ದೀನ್‌, “ಅಪಾಯಕ್ಕೆ ಸಿಲುಕಿರುವ 10 ಮಂದಿ ಮೀನುಗಾರರು ಸಂಪರ್ಕಕ್ಕೆ ಸಿಗುತ್ತಿದ್ದಾರೆ. ಕೋರ್ಸ್‌ಗಾರ್ಡ್‌ನವರು ರಕ್ಷಣೆಗೆ ಧಾವಿಸಿದ್ದಾರೆ. ನಾವು ಕೂಡ ಕಾರವಾರಕ್ಕೆ ತೆರಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಪದವಿ ಪರೀಕ್ಷೆ ಮುಂದೂಡಿಕೆ ಶನಿವಾರ ಪದವಿ ಕಾಲೇಜುಗಳಿಗೂ ರಜೆ ಘೋಷಿಸಿರುವುದರಿಂದ ಮಂಗಳೂರು ವಿ.ವಿ. ಪರೀಕ್ಷೆ ಮುಂದೂಡಲಾಗಿದೆ.

ರಥಬೀದಿಯಲ್ಲಿ ನೀರು
ಉಡುಪಿ: ಕಳೆದ ಮೂರು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಮೊಣಕಾಲು ಮುಳುಗುವಷ್ಟು ನೀರು ನಿಂತಿದ್ದು, ತಗ್ಗಿನಲ್ಲಿರುವ ಚಂದ್ರಮೌಳೀಶ್ವರ ದೇವಸ್ಥಾನದ ಒಳಗೆ ನೀರು ನುಗ್ಗಿತ್ತು. ದೇವಸ್ಥಾನದ ಮುಂಭಾಗ ಹಾಗೂ ಒಳಪೌಳಿಯಲ್ಲೂ ಮಳೆ ನೀರು ಹರಿಯುತ್ತಿತ್ತು. ಇದರಿಂದ ಭಕ್ತರು ಸಮಸ್ಯೆ ಎದುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next