Advertisement

ಪುನರ್ವಸು ಅಬ್ಬರ ಮೂವರ ಸಾವು

06:00 AM Jul 08, 2018 | Team Udayavani |

ಉಡುಪಿ/ಮಂಗಳೂರು/ಬೆಂಗಳೂರು: ರಾಜ್ಯದ ಕರಾವಳಿ, ಕೊಡಗು, ಮಲೆನಾಡು ಭಾಗಗಳಲ್ಲಿ ಪುನರ್ವಸು ಮಳೆ ಚುರುಕಾಗಿದ್ದು, ಶನಿವಾರ ಎಡೆಬಿಡದೆ ಸುರಿದ ಭಾರೀ ಮಳೆಗೆ ಮೂವರು ಮೃತಪಟ್ಟು, ನೂರಾರು ಮನೆಗಳು ಜಲಾವೃತವಾಗಿವೆ. ಶುಕ್ರವಾರ ತಡರಾತ್ರಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಆವರಣ ಗೋಡೆ ಕುಸಿದು ಅಜ್ಜಿ ಪಾರ್ವತಿ (65) ಹಾಗೂ ಮೊಮ್ಮಗ ಧನುಷ್‌ (13) ಸ್ಥಳದಲ್ಲೇ ಮೃತಪಟ್ಟರು. ಚಿಕ್ಕಮಗಳೂರು ಜಿಲ್ಲೆಯ ಗಿಣಿಕಲ್‌ ಸಮೀಪದ ಗೋಣಿಬೈಲ್‌ ಗ್ರಾಮದ ಸುರೇಂದ್ರ (46) ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿ ದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಜಿಲ್ಲೆಯಲ್ಲಿ ನೂರಾರು ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. 

Advertisement

ದ.ಕ. ಜಿಲ್ಲೆಯ ಬಹಳ‌ಷ್ಟು ಕಡೆಗಳಲ್ಲಿ  ಮನೆಗಳು ಕುಸಿದು ಅಪಾರ ಪ್ರಮಾಣ ಹಾನಿ ಉಂಟಾಗಿದೆ. ಮೂಲರಪಟ್ಣದಲ್ಲಿ ತೂಗು ಸೇತುವೆಗೆ ಸಂಪರ್ಕಿಸುವ ರಸ್ತೆ ಜಲಾಮಯವಾಗಿತ್ತು. ಸೂರಿಂಜೆ ಮತ್ತು ಶಿಬರೂರು ಪ್ರದೇಶಗಳಲ್ಲಿ ನಂದಿನಿ ನದಿಯ ನೀರು ಉಕ್ಕಿ ಹಲವು ಮನೆಗಳು ಜಲಾವೃತವಾದ ಪರಿಣಾಮ 16 ಮಂದಿಯನ್ನು ಅಗ್ನಿಶಾಮಕ ದಳ ಮತ್ತು ಪೊಲೀಸರು ದೋಣಿಯಲ್ಲಿ ರಕ್ಷಿಸಿದರು. 

ಕುಂದಾಪುರ ಭಾಗದ ಕೋಡಿ, ಗಂಗೊಳ್ಳಿ, ಮರವಂತೆ, ಸೋಮೇಶ್ವರ ಭಾಗದಲ್ಲಿ ಕಡಲಬ್ಬರ ಜೋರಾಗಿದ್ದು, ಭಾರೀ ಗಾತ್ರದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಡೀಲ್‌ ಹಾಗೂ ಅಡ್ಯಾರ್‌, ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಜಂಕ್ಷನ್‌ಗಳಲ್ಲಿ ಮಳೆಯಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಯಿತು. ಪಣಂಬೂರು ಕೂರಿಕಟ್ಟದಲ್ಲಿ ತಮಿಳ್ನಾಡು ಮೂಲದ ಎರಡು ಕೂಲಿ ಕಾರ್ಮಿಕ ಕುಟುಂಬಗಳ ಡೇರೆ ಸಮುದ್ರ ಪಾಲಾಗಿದೆ. ಇದೇ ಸಂದರ್ಭದಲ್ಲಿ ಸಂಭಾವ್ಯ ಅಪಾಯ ಎದುರಿಸಲು ಎನ್‌ಆರ್‌ಡಿಎಫ್ ನಗರಕ್ಕೆ ಆಗಮಿಸು ತ್ತಿದ್ದು, ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲು ರಾಂಚಿಯ ಅಧ್ಯಯನ ಪ್ರವಾಸ ಮೊಟಕುಗೊಳಿಸಿ ವಾಪಸಾಗಿದ್ದಾರೆ. ವಸತಿ ಸಚಿವ ಯು.ಟಿ. ಖಾದರ್‌ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಕಪ್ಪೆಶಂಕರ ಜಲಾವೃತ
ಕುಮಾರಧಾರಾ, ತುಂಗಾ, ಭದ್ರಾ, ನೇತ್ರಾವತಿ, ಶರಾವತಿ, ಅಘನಾಶಿನಿ, ಕೃಷ್ಣೆ ಸಹಿತ ಹಲವು ನದಿಗಳಲ್ಲಿ ನೆರೆ ಬಂದಿದ್ದು, ಶೃಂಗೇರಿಯ ಕಪ್ಪೆಶಂಕರ ಮತ್ತೆ ಮುಳುಗಿದೆ.  ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ 73ನೇ ಮೈಲು ಎಡಕುಮೇರಿ ಸಮೀಪ ಶನಿವಾರ ಬೆಳಗ್ಗೆ ಮತ್ತೆ ಗುಡ್ಡ ಕುಸಿದಿದ್ದು, ಮಂಗಳೂರು-ಬೆಂಗಳೂರು ರೈಲು ಮುಕ್ಕಾಲು ತಾಸು ತಡವಾಗಿ ಸಂಚರಿಸಿತು. ಈ ಮಧ್ಯೆ, ರಾಜ್ಯದಲ್ಲಿ ಮುಂದಿನ 2-3 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಮಾಲ ಗೋಡು, ಹೊನ್ನವಳ್ಳಿ, ಕಿಕ್ರೆ ಹಳ್ಳದ ಸೇತುವೆ ಸೇರಿದಂತೆ ಹಲವು ಸೇತುವೆಗಳು ಮುಳುಗಿದ್ದು, ರಸ್ತೆ ಸಂಚಾರ ಬಂದ್‌ ಆಗಿದೆ. ಭಾರೀ ಮಳೆಯಿಂದ ರಸ್ತೆ ಕಾಣದೆ ಶೃಂಗೇರಿ-ಕೊಪ್ಪ ನಡುವಿನ ತೊರೆಹಡ್ಲು ಸಮೀಪ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ವಾಲಿದ್ದು, 22 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಚಾರ್ಮಾಡಿ ಘಾಟ್‌ನಲ್ಲಿ ನಿರಂತರ ಮಳೆಯಿಂದ ಸಂಚಾರಕ್ಕೆ ಅಡ್ಡಿಯಾಗಿದೆ.

Advertisement

ಹಾರಂಗಿ ಜಲಾಶಯ ಭರ್ತಿ
ಕೊಡಗಿನ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ನಾಲ್ಕು ಕ್ರಸ್ಟ್‌ ಗೇಟ್‌ಗಳ ಮೂಲಕ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಹರಿಯಬಿಡಲಾಗಿದೆ. ಕೃಷ್ಣಾ ನದಿ ಭರ್ತಿಯಾಗಿ ಹರಿಯುತ್ತಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ದತ್ತವಾಡ- ಮಲಿಕವಾಡ ಸೇತುವೆಗಳು ಜಲಾವೃತವಾಗಿವೆ.

ಉಡುಪಿ ಜಿಲ್ಲೆಯಲ್ಲೂ ಅಪಾರ ಪ್ರಮಾಣ ಹಾನಿ
ಉಡುಪಿ ಜಿಲ್ಲೆ ಅಕ್ಷರಶಃ ಮಳೆಗೆ ತತ್ತರಿಸಿದ್ದು, ಕಾಪು ಮತ್ತು ಉಡುಪಿ ತಾಲೂಕು ಗರಿಷ್ಠ ನೆರೆ ಪರಿಸ್ಥಿತಿ ಎದುರಿಸಿವೆ. ಹಿರಿಯರು, ಗರ್ಭಿಣಿ, ಬಾಣಂತಿಯರ ಸಹಿತ 800ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಪೊಲೀಸ್‌ ಪಡೆ, ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕಾಪು ತಾಲೂಕಿನಲ್ಲಿ 200ಕ್ಕೂ ಅಧಿಕ ಮನೆಗಳು ಜಲಾವೃತ ಗೊಂಡಿವೆ.  ಕಾಪುವಿನ ಸರಕಾರಿ ಶಾಲೆಯಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. ಉಡುಪಿ ನಗರ, ಮಲ್ಪೆ, ಬ್ರಹ್ಮಾವರ, ಕೋಟ ಭಾಗಗಳಲ್ಲಿ ಮಳೆಯ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. 

ಕುಂದಾಪುರದ ಖಾರ್ವಿಕೆರೆ ವಾರ್ಡ್‌ನಲ್ಲಿ 3 ಮನೆ ಗಳು ಕುಸಿದಿವೆ.  ಕೊಲ್ಲೂರಿನಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾರ್ಕಳ ತಾಲೂಕಿ ನಲ್ಲಿ ಬೆಳ್ಮಣ್‌ನ ಶಾಂಭವಿ ಮತ್ತು ಉಡುಪಿಯ ಸ್ವರ್ಣಾ ನದಿ ಉಕ್ಕಿ ಹರಿಯುತ್ತಿದ್ದು ಎಚ್ಚರಿಕೆ ಗಂಟೆ ಬಾರಿಸಿದೆ.  ಮುಂಡ್ಕೂರು- ಬೆಳ್ಮಣ್‌ ರಸ್ತೆ ಮುಂಡ್ಕೂರು ಪಡಿತ್ತಾರು ಬಳಿ  ಶಾಂಭವಿ ನದಿ ನೆರೆ ನೀರು ತುಂಬಿ ಸಂಚಾರಕ್ಕೆ  ಅಡಚಣೆ ಉಂಟಾಗಿದೆ. 

ರಾ.ಹೆ. 66ರಲ್ಲಿ ಭಾಗಶಃ ನೀರು 
ಕಟಪಾಡಿ ಬಳಿಯ ಕಲ್ಲಾಪುವಿನಲ್ಲಿ ರಾ.ಹೆ.ಯಲ್ಲಿ ನೆರೆ ನೀರು ಆವರಿಸಿತ್ತು. ವಾಹನ ಸಂಚಾರದ ಸುರಕ್ಷತೆ ಗಾಗಿ ಪೊಲೀಸರು ಹೆದ್ದಾರಿಯಲ್ಲಿ ಬ್ಯಾರಿಕೇಡ್‌ ಹಾಕಿದ್ದರು.  ನೆರೆ ಪೀಡಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಶಾಸಕರು ಭೇಟಿ ನೀಡಿದ್ದು, ಪರಿಹಾರ ಕಾರ್ಯಕ್ಕೆ ಡಿಸಿ ಆದೇಶಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next