Advertisement

ಕರಾವಳಿಯಾದ್ಯಂತ ಬಿರುಸಿನ ಮಳೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸನ್ನದ್ಧ

01:44 AM Oct 13, 2021 | Team Udayavani |

ಮಂಗಳೂರು/ಉಡುಪಿ/ಕಾಸರಗೋಡು: ಅರಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ದಕ್ಷಿಣ ಭಾರತದಲ್ಲಿ ನಿಮ್ನ ಒತ್ತಡ (ಟ್ರಫ್‌) ಇರುವ ಕಾರಣ ಕರಾವಳಿಯಾದ್ಯಂತ ಮಂಗಳವಾರ ಬಿರುಸಿನಿಂದ ಕೂಡಿದ ಮಳೆಯಾಗಿದೆ.

Advertisement

ದ.ಕ. ಜಿಲ್ಲೆಯಾದ್ಯಂತ ದಿನವಿಡೀ ಉತ್ತಮ ಗಾಳಿ ಮಳೆಯಾಗಿದ್ದು, ಕೆಲವು ಕಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಮಂಗಳೂರು ನಗರದಲ್ಲಿ ದಿನವಿಡೀ ಮಳೆಯಾಗಿದೆ. ಅಪರಾಹ್ನ ಮತ್ತು ಸಂಜೆ ಮಳೆ ಮತ್ತಷ್ಟು ಬಿರುಸು ಪಡೆದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು.

ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಉಪ್ಪಿನಂಗಡಿ, ಪುತ್ತೂರು, ಕಡಬ, ಗುರುವಾಯನಕೆರೆ, ಮೂಡುಬಿದಿರೆ, ಬಂಟ್ವಾಳ, ಪುಂಜಾಲಕಟ್ಟೆ, ಮಡಂತ್ಯಾರು, ಸುರತ್ಕಲ್‌, ಮುಡಿಪು, ಮಂಗಳೂರು, ವಿಟ್ಲ, ಕನ್ಯಾನ, ಪಂಜ, ಸುಳ್ಯ, ಸುಬ್ರಹ್ಮಣ್ಯ, ಕಲ್ಲುಗುಡ್ಡೆ, ಐನೆಕಿದು, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ತೆಕ್ಕಾರು ಗ್ರಾಮದ ಕೊಡಂಗೆ ನಿವಾಸಿ ರಹ್‌ಮತ್‌ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಕೆಲವು ಕಡೆ ರಸ್ತೆಯಲ್ಲಿ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ನವರಾತ್ರಿ ಹಿನ್ನೆಲೆಯಲ್ಲಿ ದೇವಾಲಯ ಗಳಲ್ಲಿ ವಿಶೇಷ ಪೂಜೆ ಆದರೆ ಮಳೆಯ ಕಾರಣದಿಂದ ಬಹುತೇಕ ದೇವಾಲಯ ಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು. ಮಳೆಯ ಕಾರಣದಿಂದ ಹಲವು ದೇವಾಲಯಗಳ ಮುಂಭಾಗ ಸಂಚಾರ ದಟ್ಟಣೆ ಕೂಡ ಕಂಡುಬಂತು.

ರಸ್ತೆ ಜಲಾವೃತ, ಟ್ರಾಫಿಕ್‌ ಜಾಮ್‌
ಮಂಗಳೂರು ನಗರದಲ್ಲಿ ರಾತ್ರಿ ಬಿರುಸಿನಿಂದ ಕೂಡಿದ ಮಳೆಯಾಗಿದ್ದು, ಕೊಟ್ಟಾರಚೌಕಿ ಬಳಿ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸ್ಥಳಕ್ಕೆ ಮೇಯರ್‌ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಪಡೀಲು, ಯೆಯ್ನಾಡಿ, ಕೊಟ್ಟಾರ ಸೇರಿ ಹಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು. ನಗರದ ಹಲವು ಕಡೆ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ವಾಹನ ಸವಾರರು ತಾಸು ಗಟ್ಟಲೆ ರಸ್ತೆಯಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.

Advertisement

ನಾಲ್ಕು ದಿನ ಮಳೆ ಸಾಧ್ಯತೆ
ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದ ಅಬ್ಬರ ಕೂಡ ಹೆಚ್ಚಿರುವ ಸಾಧ್ಯತೆ ಇದ್ದು, ಮೀನುಗಾರರು ಜಾಗ್ರತೆಯಿಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ನಮ್ಮ ಕೆಲಸ ಗುರುತಿಸಿ ಜೆಡಿಎಸ್‌ಗೆ ಮತ ಹಾಕುತ್ತಾರೆ : ಮಾಜಿ ಪ್ರಧಾನಿ ದೇವೆಗೌಡ

ಸೆಕೆ ಕಡಿಮೆಯಾಗಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಸೆಕೆ ಮಾತ್ರ ಕಡಿಮೆ ಯಾಗಿಲ್ಲ. ಕೆಲವು ದಿನಗಳಿಂದ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ಮಂಗಳೂರಿನಲ್ಲಿ ಮಂಗಳವಾರ 27.9 ಡಿ.ಸೆ. ಗರಿಷ್ಠ ಮತ್ತು 23.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ. ಮುಂಬರುವ ದಿನಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಕಾಸರಗೋಡು: ನಿರಂತರ ಮಳೆ
ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಅಪಾರ ನಷ್ಟ ಸಂಭವಿಸಿದೆ.
ಕೆಲವು ಕಡೆಗಳಲ್ಲಿ ಮನೆಗಳು ಕುಸಿದಿದ್ದು, ಇನ್ನೂ ಕೆಲವೆಡೆ ಭತ್ತ, ಅಡಿಕೆ, ಬಾಳೆ, ತೆಂಗು ಕೃಷಿಗೆ ಹಾನಿಯಾಗಿದೆ.

ದ.ಕ. ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದೆ. ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತಿದೆ. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡ ಜಿಲ್ಲೆಯಲ್ಲಿ ಸನ್ನದ್ಧವಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದ ಅನಾಹುತ ಸಂಭವಿಸದಂತೆ ತಹಶೀಲ್ದಾರರು ಎಚ್ಚರದಲ್ಲಿರುವಂತೆ ಸೂಚನೆ ನೀಡಲಾಗಿದೆ.
ಡಾ| ರಾಜೇಂದ್ರ ಕೆ.ವಿ.,
ದ.ಕ. ಜಿಲ್ಲಾಧಿಕಾರಿ

ಉಡುಪಿ: ತಗ್ಗು ಪ್ರದೇಶದಲ್ಲಿ ನೆರೆ ಭೀತಿ
ಉಡುಪಿ: ಜಿಲ್ಲೆಯಾದ್ಯಂತ ಮಂಗಳವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ನಗರ ಸೇರಿದಂತೆ ಕೆಲವು ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ.

ಬೆಳಗ್ಗೆಯಿಂದ ಮೋಡದ ವಾತಾವರಣ ಇದ್ದು, ಸಂಜೆ 4.30ರ ಬಳಿಕ ಭಾರೀ ಮಳೆ ಸುರಿಯಿತು. ಕೆಲವೆಡೆ ಸಿಡಿಲು, ಮಿಂಚಿನಿಂದ ವಿದ್ಯುತ್‌ ವ್ಯತ್ಯಯವಾಯಿತು. ನಗರ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಕ್ಕೆಲಗಳ ಚರಂಡಿಗಳು ತುಂಬಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ದಿಢೀರನೇ ಸುರಿದ ಮಳೆಯಿಂದಾಗಿ ನಗರದ ಕಲ್ಸಂಕ ಸೇರಿದಂತೆ ಹಲವು ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಹಿರಿಯಡ್ಕದ ಬಜೆ ಡ್ಯಾಂನಲ್ಲಿ ನೀರು ತುಂಬಿ ಹರಿಯುತ್ತಿದೆ.

ಸ್ಥಳೀಯಾಡಳಿತ ಸನ್ನದ್ಧ
ನಗರದ ಕಲ್ಸಂಕ ತೋಡು ತುಂಬಿ ಹರಿಯುತ್ತಿದ್ದು, ಕಲ್ಸಂಕ, ಬಡಗುಪೇಟೆ ರಸ್ತೆ, ರಾಜಾಂಗಣ ಪಾರ್ಕಿಂಗ್‌ ಪ್ರದೇಶ, ಮೂಡನಿಡಂಬೂರು, ದೊಡ್ಡಣಗುಡ್ಡೆ ರಸ್ತೆಗಳು ಜಲಾವೃತಗೊಂಡಿವೆ. ಬೈಲಕೆರೆ, ಮಠದಬೆಟ್ಟು, ಮಣಿಪಾಲದ ರಾಜೀವ್‌ ನಗರ, ಶಾಂತಿನಗರ, ಕೆಳ ಶಾಂತಿನಗರ, ಕೈಗಾರಿಕಾ ಪ್ರದೇಶ, ನಿಟ್ಟೂರಿನಲ್ಲಿ ನೆರೆ ಭೀತಿ ಆವರಿಸಿದೆ. ಸಂಭಾವ್ಯ ಪರಿಸ್ಥಿತಿ ಎದುರಿಸಲು ಸ್ಥಳೀಯಾಡಳಿತ ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next