ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆ.3ರಿಂದ 6ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಸೇರಿ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ತುಮಕೂರು, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ ಮತ್ತು ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಸೇರಿ ಒಟ್ಟಾರೆ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಸಂಪಾಜೆ, ಭಾಗಮಂಡಲದಲ್ಲಿ 11 ಸೆಂ.ಮೀ ಮಳೆ
ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಶನಿವಾರದಿಂದ ಸುರಿಯುತ್ತಿರುವ ಮಳೆ ಮುಂದುವರಿದಿದೆ.
ಭಾನುವಾರ ಕೊಡಗು ಜಿಲ್ಲೆಯ ಸಂಪಾಜೆ, ಭಾಗಮಂಡಲ ಮತ್ತು ತುಮಕೂರು ಜಿಲ್ಲೆಯ ವೈ.ಎನ್. ಕೋಟೆಯಲ್ಲಿ 11 ಸೆಂ.ಮೀ. ಮಳೆಯಾಗಿದೆ. ನಾಪೋಕ್ಲು, ಬೆಳ್ಳಟ್ಟಿಯಲ್ಲಿ 8 ಮತ್ತು ಮುಳಬಾಗಿಲಿನಲ್ಲಿ 7 ಸೆಂ.ಮೀ. ಮಳೆಯಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.