ಚಿಕ್ಕಮಗಳೂರು: ಮಲೆನಾಡಿನಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿದ್ದು ತಾಲೂಕಿನ ಹಲವು ಕಡೆ ಅನಾಹುತಗಳು ಸಂಭವಿಸಿದ ಘಟನೆ ವರದಿಯಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ತರುವೆ, ಬಣಕಲ್, ಬಾಳೂರು, ದೇವರಮನೆ, ಗುತ್ತಿ, ಕುಂದೂರು, ಮತ್ತಿಕಟ್ಟೆ, ಜಾಣಿಗೆ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು ಕೆಲವು ಕಡೆ ಮನೆಯ ಮೇಲೆ ಮರಗಳು ಉರುಳಿ ಬಿದ್ದು ಸಾಕಷ್ಟು ನಷ್ಟ ಸಂಭವಿಸಿದೆ, ಅಲ್ಲದೆ ಬಿರುಗಾಳಿಯ ಹೊಡೆತಕ್ಕೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು ವಿದ್ಯುತ್ ತಂತಿಗಳು ನದಿಗೆ ಬಿದ್ದು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಭಾರಿ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಭಾರಿ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಕಳಸ ತಾಲೂಕಿನ ಹಿರೇಬೈಲ್ ನ ಇಡಕಣೆ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಮನೆಯಲ್ಲಿದ್ದ ದಿನಸಿ ಪದಾರ್ಥ, ಪಾತ್ರೆಗಳು ಸಂಪೂರ್ಣ ನಾಶವಾಗಿದೆ.
ಇದನ್ನೂ ಓದಿ: ಹತ್ತು ವರ್ಷದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಿ: ಸರಕಾರಕ್ಕೆ ಬೊಮ್ಮಾಯಿ ಆಗ್ರಹ