Advertisement

ರಾಜ್ಯದ ವಿವಿಧೆಡೆ ವರುಣನ ಆರ್ಭಟ; ಭಾರಿ ಹಾನಿ, ಪರದಾಟ

10:13 AM Oct 11, 2017 | |

ಬೆಂಗಳೂರು: ನೆಲಮಂಗಲ, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೆ ಭಾರಿ ಮಳೆ ಸುರಿದಿದ್ದು ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮನೆಗಳು ಕುಸಿದು ಬಿದ್ದಿದ್ದು, ವಿಜಯಪುರದ ಬಸವನಬಾಗೇವಾಡಿಯಲ್ಲಿ ಮನೆ ಕುಸಿದು ತಾಯಿ, ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

ನೆಲ ಮಂಗಲದಲ್ಲಿ ಅಮಾನಿ ಕೆರೆಯ ಕೊಡಿ ಒಡೆದಿದ್ದು,ಸುಮಾರು 400 ಮನೆಗಳಿಗೆ ನೀರು ನುಗ್ಗಿದೆ. ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೆಡೆ ಮನೆಗಳ ಗೋಡೆಗಳು ಕುಸಿದು ಬೀಳುತ್ತಿವೆ. 

ರಾಮನಗರ ಜಿಲ್ಲೆಯಾದ್ಯಂತ ಕುಂಭದ್ರೋಣ ಮಳೆ ಸುರಿದಿದ್ದು, ಕನಕಪುರ -ಬೆಂಗಳೂರು ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಬಸ್‌ಗಳು ಮತ್ತು ವಾಹನಗಳ ಸಂಚಾರ ಸಾಧ್ಯವಾಗದೆ ಪ್ರಯಾಣಿಕರು ಪರದಾಡಬೇಕಾಗಿದೆ. ಬಸ್‌ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿರುವ ಬಗ್ಗೆ ವರದಿಯಾಗಿದೆ. 

ವಿಜಯಪುರದಲ್ಲೂ ಭಾರೀ ಮಳೆ ಸುರಿದ್ದಿದ್ದು ಬಸವನಬಾಗೇವಾಡಿಯಲ್ಲಿ ಮನೆ ಕುಸಿದು ತಾಯಿ,ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. 60 ವರ್ಷದ ಶಂಕ್ರಮ್ಮ ರಾಮಚಂದ್ರಪ್ಪ ಮತ್ತು ಮಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. 

ಕೆಲ ತಗ್ಗು ಪ್ರದೇಶದಲ್ಲಿ ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರ ಸಾಧ್ಯವಾಗುತ್ತಿಲ್ಲ. 

Advertisement

ಬೀದರ್‌ನಲ್ಲೂ ತಡರಾತ್ರಿ ಭಾರೀ ಮಳೆ ಸುರಿದಿದ್ದು,ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. 

ಚಾಮರಾಜನಗರದಲ್ಲಿ ಯುವಕನ ರಕ್ಷಣೆ 
ಚಾಮರಾಜನಗರದಲ್ಲೂ ವರುಣ ಅಬ್ಬರಿಸಿದ್ದು, ಕೊಳ್ಳೇಗಾಲದ ಲೊಕ್ಕನಹಳ್ಳಿಯ ಉಡುತೊರೆ ಹಳ್ಳದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸ್ಥಳೀಯ ಯುವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. 

ಕೊಳ್ಳೇಗಾಲ-ಸತ್ತಿಮಂಗಲ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತಿದ್ದು ಸಂಚಾರಕ್ಕೆ ಪರದಾಡಬೇಕಾಗಿದೆ. ಹಲವೆಡೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕೋಲಾರದಲ್ಲೂ ಮಳೆ; ಶಾಲಾ ಮಕ್ಕಳ ರಕ್ಷಣೆ 
ಕೋಲಾರದಲ್ಲೂ ಭಾರಿ ಮಳೆ ಸುರಿದಿದ್ದು, ಕೆರೆಯ ಕೋಡಿ ಒಡೆದ ಪರಿಣಾಮ ವಡಗೂರು ಗ್ರಾಮದ ಕೋರ್‌ ಇನ್‌ ಶಾಲೆಗೆ ನೀರು ನುಗ್ಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ವಿಪತ್ತು ನಿರ್ವಹಣಾ ದಳದ ಸಿಬಂದಿಗಳು ಬೋಟ್‌ ಬಳಸಿ 150 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next