Advertisement

ಧಾರಾಕಾರ ಮಳೆಗೆ ಮನೆಗಳು ಧರೆಗೆ; ಜನಜೀವನ ಅಸ್ತವ್ಯಸ್ತ

02:37 PM Sep 27, 2020 | sudhir |

ಬಾಗಲಕೋಟೆ: ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆಯಿಂದ ಉತ್ತರಿ ಮಳೆ ಎಡಬಿಡದೇ ಸುರಿದಿದ್ದು, ಶನಿವಾರ ಹಸ್ತ ಮಳೆ ಆರಂಭಗೊಂಡಿದೆ. ಶನಿವಾರವೂ ಇಡೀ ದಿನ ಜಿಲ್ಲೆಯಾದ್ಯಂತ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತ ಮಾಡಿದೆ.
ಶುಕ್ರವಾರ ಸಂಜೆಯಿಂದಲೇ ಸುರಿಯುತ್ತಿರುವ ಮಳೆ, ಶನಿವಾರವೂ ನಿಂತಿಲ್ಲ. ಆಗೊಮ್ಮೆ, ಈಗೊಮ್ಮೆ ಎಂಬಂತೆ ಅರ್ಧ ಗಂಟೆ ಬಿಡುವು ನೀಡಿದರೂ, ಮತ್ತೆ ಸುರಿಯುತ್ತಿದೆ. ಹೀಗಾಗಿ ಮಲೆನಾಡ ಅನುಭವ ಸೃಷ್ಟಿಸಿದೆ.

Advertisement

ಹಳ್ಳದಲ್ಲಿ ಕೊಚ್ಚಿ ಹೋದ ಯುವಕ:
ನಿನ್ನೆಯಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮುಧೋಳ ತಾಲೂಕಿನ ಒಂಟಗೋಡಿ ಬಳಿ ಬೈಕ್‌ ಮೇಲೆ ಹಾಲು ತರಲು ಹೊರಟಿದ್ದ ಡಿಸಿಸಿ ಬ್ಯಾಂಕ್‌ ಮುಧೋಳ ಶಾಖೆಯ ನೌಕರ, ಹಳ್ಳದಲ್ಲಿ ಕೊಚ್ಚಿ
ಹೋಗಿದ್ದಾನೆ. ಮೂಲತಃ ಮುಧೋಳ ತಾಲೂಕು ಕುಳಲಿ ಗ್ರಾಮದ ಸಂತೋಷ ಅಡವಿ (27) ಎಂಬಾತ, ಸೋದರ ಮಾವನ ಮನೆ
ಒಂಟಗೋಡಿಯಲ್ಲಿ ವಾಸವಾಗಿದ್ದು, ಬೈಕ್‌ ಮೇಲೆ ಒಂಟಗೋಡಿಯ ಹಳ್ಳ (ಮುಧೋಳ-ಯಾದವಾಡ ರಸ್ತೆಯಲ್ಲಿ) ದಾಟುವ ವೇಳೆ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ.

ಒಂದೇ ದಿನದಲ್ಲಿ ಬಿದ್ದಿವೆ 518 ಮನೆ:
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಸುಮಾರು 581 ಮನೆಗಳು ಕುಸಿದು ಬಿದ್ದಿವೆ. ಇನ್ನೂ ಬಿದ್ದ ಮನೆಗಳ ಸರ್ವೇ ಮಾಡುತ್ತಿದ್ದು, ಇದು ಸಾವಿರಕ್ಕೂ ಹೆಚ್ಚು ದಾಟುವ ಅಂದಾಜಿದೆ. ಅಲ್ಲದೇ ನಿರಂತರ ಮಳೆಗೆ ಗ್ರಾಮೀಣ ಭಾಗದ ಮಣ್ಣಿನ ಮನೆಗಳು ಕುಸಿಯುತ್ತಲೇ ಇವೆ. ಹೀಗಾಗಿ ಜನರು ಮನೆ ಮೇಲೆ ಪ್ಲಾಸ್ಟಿಕ್‌ ತಡಪಾಲ್‌
ಹಾಕಿ, ಮಣ್ಣಿನ ಮನೆ ಬೀಳದಂತೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ :ಧಾರಾಕಾರ ಮಳೆ: ಹಲವೆಡೆ ಸಂಚಾರ ಸ್ಥಗಿತ : ಸವದತ್ತಿ ಮಾರ್ಗದ ಸೇತುವೆ ಜಲಾವೃತ-ಪರದಾಟ

ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ:
ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ನದಿಯ ಮತ್ತು ಹಳ್ಳಗಳ ದಡದಲ್ಲಿ ವಾಸಿಸುತ್ತಿರುವ
ಸಾರ್ವಜನಿಕರು ಹಾಗೂ ಕಚ್ಚಾ ಮಣ್ಣಿನ ಮನೆ, ಗುಡಿಸಲುಗಳಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ
ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next