ಕಲಾದಗಿ: ಉತ್ತರಿ ಹಾಗೂ ಹಸ್ತಾ ಮಳೆ ಸುರಿದು ರೈತರು ಬೆಳೆ ಹಾನಿ ನಷ್ಟ ಅನುಭವಿಸಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳು ಬಿದ್ದು ಜನರು ಬೀದಿ ಬದುಕು ಸಾಗಿಸುವಂತೆ ಮಾಡಿದೆ. ಲಾಕ್‌ಡೌನ್ ನಿಂದ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿದ್ದ ರೈತನಿಗೆ ಮತ್ತೆ ಈಗ ಮುಂಗಾರು ಬೆಳೆ ಫಸಲು ಕಟಾವಿಗೆ ಬಂದಿದ್ದ ಸಂದರ್ಭದಲ್ಲಿ ಸತತ ಸುರಿದ ಮಳೆ ಬೆಳೆ ಹಾನಿಯನ್ನು ಉಂಟುಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಜತೆಗೆ ಗ್ರಾಮೀಣ ಪ್ರದೇಶದಲ್ಲಿನ ಮಣ್ಣಿನ ಮನೆಗಳು ನೆಲಕಚ್ಚಿವೆ. ಹೋಬಳಿ ವ್ಯಾಪ್ತಿಯ ತುಳಸಿಗಿರಿ ಗ್ರಾಮದಲ್ಲಿ 14 ಮನೆಗಳು, ಖಜ್ಜಿಡೋಣಿ 1, ಗದ್ದನಕೇರಿ ತಾಂಡಾದಲ್ಲಿ 6, ದೇವನಾಳ 2, ಚಿಕ್ಕಸಂಶಿ 3, ಹಿರೇಸಂಶಿ 7, ಗೊವಿಂದಕೊಪ್ಪ 1, ಹಿರೇಶೆಕೇರಿ 7, ಚಿಕ್ಕಶೆಲ್ಲಿಕೇರಿ 3, ಯಂಕಂಚಿ 2 ಮನೆ ಸೇರಿ ಒಟ್ಟು 46 ಮನೆಗಳು ಬಿದ್ದಿವೆ.
ಜೀವನ ಬದುಕಿಗೆ ಇದ್ದ ಒಂದೇ ಮನೆ ಸತತವಾಗಿ ಸುರಿದ ಮಳೆಗೆ ಬಿದ್ದಿದೆ. ಇನ್ನು ಎಲ್ಲಿ ವಾಸ ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಸದ್ಯ ತಗಡಿನ ಸಣ್ಣ ಶೆಡ್‌ನಲ್ಲಿ ವಾಸ ಮಾಡುತ್ತಿದ್ದೇವೆ. ಸರಕಾರ ಕೂಡಲೇ ಪರಿಹಾರ ಧನ ನೀಡಿ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಬೇಕು.
– ದುಂಡಪ್ಪ ಮರಪುಲಿ, ಹಿರೇಶೆಲ್ಲಿಕೇರಿ ಗ್ರಾಮಸ್ಥ
ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ ಕಳೆದೊಂದು ವಾರದಲ್ಲಿ ಹತ್ತು ಗ್ರಾಮದಲ್ಲಿ ಒಟ್ಟು 46 ಮನೆಗಳು ಬಿದ್ದಿದ್ದು, ಹಾನಿಯ ವರದಿಯನ್ನು ಬಾಗಲಕೋಟೆ ತಹಶೀಲ್ದಾರ್‌ಗೆ ನೀಡಲಾಗಿದೆ.
– ಆರ್.ಆರ್.ಕುಲಕರ್ಣಿ, ಕಂದಾಯ ನಿರೀಕ್ಷಕ