Advertisement
ಗ್ರಾಮೀಣ ಪ್ರದೇಶದಲ್ಲಿ ಕಾಡಿದ ನಿರಂತರ ವಿದ್ಯುತ್ ಸಮಸ್ಯೆ, ಸುಡು ಬಿಸಿಲಿನ ತಾಪಕ್ಕೆ ಅರ್ಧದಷ್ಟು ತರಕಾರಿ ಬೆಳೆ ಕಳೆಕೊಂಡರೆ, ಇದೀಗ ಕೆಲ ದಿನಗಳ ಹಿಂದೆ ಬಿದ್ದಿರುವ ಆಲಿಕಲ್ಲು ಮಳೆಯಿಂದಾಗಿ ತರಕಾರಿ ಗಿಡ ಸೇರಿದಂತೆ ಸೌತೆಕಾಯಿಯಂತಹ ಬೆಲೆಬಾಳುವ ತರಕಾರಿಯನ್ನು ಕಳೆದುಕೊಂಡು ಕೈ ಸುಟ್ಟುಕೊಂಡಿದ್ದಾರೆ. ಭರಪೂರ ಲಾಭದ ಆಸೆಯಿಂದ ಸಾಕಷ್ಟು ಖರ್ಚು ಮಾಡಿ ಬೆಳೆದ ತರಕಾರಿ ರೈತರಿಗೆ ನಷ್ಟವನ್ನೇ ತಂದಿದೆ.
ಕೃಷಿಗೆ ಪ್ರಾಕೃತಿಕವಾಗಿ ಹಲವು ತೊಂದರೆಗಳಿವೆ. ಕಾಡು ನಾಶವಾಗಿ ಮಂಗ, ಕಾಡು ಹಂದಿ ಹಾಗೂ ನವಿಲುಗಳ ಗುಂಪು ನಾಡಿಗೆ ಲಗ್ಗೆಯಿಟ್ಟು ಬೆಳೆದು ನಿಂತ ಬಳ್ಳಿ ಹಾಗೂ ಕಾಯಿಯನ್ನು ತಿಂದು ನಾಶಪಡಿಸುತ್ತಿವೆ. ಬಿತ್ತನೆ ಮಾಡಿದ ಬೀಜವನ್ನು ಮೊಳಕೆಯಲ್ಲೇ ತಿನ್ನುವ ಆಫ್ರಿಕನ್ ಬಸವನ ಹುಳಗಳ ಸಂಘರ್ಷದೊಂದಿಗೆ ಕೃಷಿ ಕಾಯಕ ಮಾಡಬೇಕಾಗಿದೆ. ಹೀಗೆ ಬೆಳೆದ ತರಕಾರಿ ಗಿಡಗಳಿಗೆ ಸಮರ್ಪಕ ನೀರುಣಿಸಲು ವಿದ್ಯುತ್ ಸಮಸ್ಯೆಯಾದರೆ ಇದೀಗ ಬಲಿತ ಗಿಡಗಳಿಗೆ ಅಕಾಲಿಕ ಆಲಿಕಲ್ಲು ಮಳೆ ಸುರಿದು ತರಕಾರಿ ಕೃಷಿ ಸಂಪೂರ್ಣ ನಾಶವಾಗುವ ಹಂತ ತಲುಪಿದೆ. ಮಾರುಕಟ್ಟೆಯಲ್ಲೂ ಬೆಲೆಯಿಲ್ಲ
ಒಂದೆಡೆ ಮಧ್ಯವರ್ತಿಗಳ ಕಾಟದಿಂದಾಗಿ ಬೆಳೆದ ತರಕಾರಿಗಳಿಗೆ ಸಮರ್ಪಕವಾಗಿ ಬೆಲೆ ಸಿಗದೆ ರೈತ ಹೈರಾಣಾಗಿದ್ದಾನೆ. ಇದೀಗ ಆಲಿಕಲ್ಲು ಮಳೆ ಬಂದಿರುವುದನ್ನೇ ನೆಪವಾಗಿ ಇಟ್ಟುಕೊಂಡು ಮಧ್ಯವರ್ತಿಗಳು ರೈತರ ಕೈಯಿಂದ ಉತ್ತಮ ಬೆಲೆ ಬಾಳುವ ಸೌತೆಯನ್ನು ಜುಜುಬಿ ಮೊತ್ತಕ್ಕೆ ಖರೀದಿಸಿ ಮತ್ತೆ ಅದೇ ಮಾರುಕಟ್ಟೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ರೈತರಿಗೆ ವ್ಯಾವಹಾರಿಕವಾಗಿಯೂ ನಷ್ಟವಾಗುತ್ತಿದೆ.
Related Articles
ಕರಾವಳಿಯ ಹೆಚ್ಚಿನ ಭಾಗಗಳಲ್ಲಿ ಭತ್ತದ ಗದ್ದೆಗಳಲ್ಲಿ ತರಕಾರಿಗಳನ್ನು ಬೆಳೆಸುತ್ತಾರೆ. ಮೇ, ಜೂನ್ ತಿಂಗಳಲ್ಲಿ ಗದ್ದೆಯಲ್ಲಿ ಭತ್ತ ಕೃಷಿ ಮಾಡಿದ ಬಳಿಕ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸೌತೆಕಾಯಿಯನ್ನು ಮತ್ತು ಇತರ ತರಕಾರಿಗಳನ್ನು ಬೆಳೆಯುತ್ತಾರೆ. ಆಗಸ್ಟ್ ತಿಂಗಳಲ್ಲಿ ಮಳೆಗಾಲದ ಮಳೆ ನೀರನ್ನು ಆಶ್ರಯಿಸಿ ತರಕಾರಿ ಮಾಡಿದರೆ ಡಿಸೆಂಬರ್ ತಿಂಗಳಲ್ಲಿ ಅನ್ಯ ನೀರಿನ ಮೂಲಗಳ ಆಶ್ರಯದಲ್ಲಿ ತರಕಾರಿ ಬೆಳೆಯುತ್ತಾರೆ. ಆದರೆ ಈ ಬಾರಿ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆಯಿದ್ದ ಕಾರಣ ಸೌತೆ ಹಾಗೂ ಇತರ ತರಕಾರಿಗಳ ಕೃಷಿಯನ್ನು ನಾಟಿ ಮಾಡಲಾಗದೆ ಒಂದು ಅವಧಿಯ ತರಕಾರಿಯ ಆದಾಯವನ್ನೂ ಕಳೆದುಕೊಂಡಿದ್ದಾರೆ.
Advertisement
ಸಂಗ್ರಹಿಸಿಡಲು ಅಸಾಧ್ಯಸೌತೆ ಕಾಯಿ ಹಲವು ಸಮಯದವರೆಗೆ ಸಂಗ್ರಹಿಸಿಡಬಹುದಾದ ತರಕಾರಿ. ಆದರೆ ಆಲಿಕಲ್ಲು ಮಳೆಗೆ ತುತ್ತಾದ ಸೌತೆ ಕಾಯಿಯನ್ನು ಬಹಳ ದಿನ ಸಂಗ್ರಹಿಸಿಡಲು ಅಸಾಧ್ಯ. ಇಂತಹ ಸೌತೆಯನ್ನು ಹತ್ತರಿಂದ ಇಪ್ಪತ್ತು ದಿನಗಳವರೆಗೆ ಮಾತ್ರ ಇಡಬಹುದಾಗಿದೆ. ಬಳಿಕ ಇದು ಕೊಳೆಯಲು ಪ್ರಾರಂಭವಾಗುತ್ತದೆ. ಮುಂದಿನ ವರ್ಷ ಬಿತ್ತನೆ ಬೀಜಕ್ಕೂ ತತ್ವಾರ
ಈ ವರ್ಷ ಸುರಿದ ಆಲಿಕಲ್ಲು ಮಳೆಯ ಪರಿಣಾಮ ಬೆಳೆದ ಸೌತೆಕಾಯಿಯನ್ನು ಸಂಗ್ರಹಿಸಿ ಇಡಲು ಅಸಾಧ್ಯವಾಗಿದೆ. ಕಡಿಮೆ ಪಕ್ಷ ಬಿತ್ತನೆ ಬೀಜಕ್ಕೆ ಬೇಕಾದ ಸೌತೆಯನ್ನು ಸಂಗ್ರಹಿಸಿಡಲೂ ಆಗಿಲ್ಲ. ಈ ಬಾರಿ ರೈತರಿಗೆ ಬೇಕಾದ ರಸಗೊಬ್ಬರ, ಕೀಟನಾಶಕಗಳು ಯಥೇತ್ಛವಾಗಿ ದೊರಕಿದ್ದವು. ಆದರೆ ಮುಂದಿನ ವರ್ಷ ತರಕಾರಿ ನಾಟಿಗೆ ಬೇಕಾದ ಬಿತ್ತನೆ ಬೀಜಕ್ಕೆ ಮಾತ್ರ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ. ಸದಾನಂದ ಆಲಂಕಾರು