Advertisement

Heavy Rain; ಕರಾವಳಿ, ಮಲೆನಾಡಿನಲ್ಲಿ ಪ್ರವಾಹ ಆತಂಕ

01:09 AM Jul 17, 2024 | Team Udayavani |

ಬೆಂಗಳೂರು : ಭಾರೀ ಮಳೆಗೆ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟ ಭಾಗದಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ನದಿಗಳು ಅಪಾಯದ ಮಟ್ಟ ಮೀರಿವೆ. ನೆರೆ ಭೀತಿಯಿಂದ ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಭೂಕುಸಿತ, ಮರಗಳು ಧರೆಗುರುಳಿದ್ದರಿಂದ ಹಲವೆಡೆ ಸಂಪರ್ಕ ಕಡಿತಗೊಂಡಿದೆ. 5 ಸೇತುವೆಗಳು ಮುಳುಗಡೆಯಾಗಿವೆ.

Advertisement

ಕೃಷ್ಣಾ, ದೂಧಗಂಗಾ, ವೇದಗಂಗಾ, ಮಲಪ್ರಭಾ, ಘಟಪ್ರಭಾ, ಪಂಚಗಂಗಾ, ತುಂಗಾ, ಭದ್ರಾ, ಹೇಮಾವತಿ, ವರದಾ, ಮಾಲತಿ, ಕುಮದ್ವತಿ, ಶರಾವತಿ, ಗಂಗಾವಳಿ, ಅಘನಾಶಿನಿ, ಕಾಳಿ, ಭಾಸ್ಕೇರಿ, ಬಡಗಣಿ ಸೇರಿ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಲಿಂಗನಮಕ್ಕಿ, ಅಂಜನಾಪುರ, ತುಂಗಾ, ಭದ್ರಾ, ಹಿಡಕಲ್‌, ಮಲಪ್ರಭಾ, ಆಲಮಟ್ಟಿ, ಸೂಪಾ, ಕದ್ರಾ, ಕೊಡಸಳ್ಳಿ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ತೀರ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ತುಂಗಾ ಅಣೆಕಟ್ಟಿನಿಂದ 70 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ.

ಕಾರವಾರ ತಾಲೂಕಿನಲ್ಲಿ 6, ಕುಮಟಾ 6, ಹೊನ್ನಾವರ 14 ಸೇರಿದಂತೆ ಒಟ್ಟು 26 ಕಾಳಜಿ ಕೇಂದ್ರಗಳನ್ನು ತೆರೆದಿದ್ದು, 2368 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಬೆಸೆಯುವ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಧರೆ ಕುಸಿದು ಸಂಚಾರ ಸ್ಥಗಿತವಾಗಿದೆ. ಕಾರವಾರ-ಕೈಗಾ ರಸ್ತೆ ಬಂದ್‌ ಆಗಿದೆ. ಶಿರಸಿಯ ರಾಗಿಹೊಸಳ್ಳಿ ಬಳಿಯೂ ಗುಡ್ಡ ಕುಸಿದಿದೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಸಿ – ದೇವಿಮನೆ ಘಾಟಿ ರಸ್ತೆಯಲ್ಲೂ ಕುಸಿತ ಸಂಭವಿಸಿದೆ.

ಅವೈಜ್ಞಾನಿಕವಾಗಿ ಗುಡ್ಡ ಕಡಿದಿರುವುದೇ ಶಿರೂರು ಗುಡ್ಡ ಕುಸಿತಕ್ಕೆ ಕಾರಣ: ಸಚಿವ
ಬೆಂಗಳೂರು: ಉತ್ತರ ಕನ್ನಡದ ಶಿರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಆಗಿರುವುದಕ್ಕೆ ಹೆದ್ದಾರಿ ವಿನ್ಯಾಸ ಹಾಗೂ ರಸ್ತೆಗಾಗಿ ಅವೈಜ್ಞಾನಿಕವಾಗಿ ಗುಡ್ಡವನ್ನು ಕಡಿದಿರುವುದೇ ಕಾರಣ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಅಂಕೋಲಾ ಸಮೀಪ ಗುಡ್ಡ ಕಡಿದು ರಸ್ತೆ ಮಾಡಿದ್ದಾರೆ. ಅಲ್ಲಿ ಸತತವಾಗಿ ಭಾರೀ ಮಳೆಯಾಗುತ್ತಿದೆ. ಗುಡ್ಡವನ್ನು ಇಳಿಜಾರಾಗಿ ಕಡಿಯದಿರುವುದರಿಂದ ಅದು ಕುಸಿದಿದೆ. 45 ಡಿಗ್ರಿ ಕೋನದಲ್ಲಿ ಕಡಿದಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ ಎಂದರು.

Advertisement

ಹೆದ್ದಾರಿಗಳ ವಿನ್ಯಾಸದಲ್ಲಿ ದೋಷ
ಹೆದ್ದಾರಿಗಳ ವಿನ್ಯಾಸದಲ್ಲಿ ದೋಷ ಇದೆ. ಹಲವೆಡೆ ಸಮಸ್ಯೆ ಎದುರಾಗುತ್ತಿದೆ. ಹಲವೆಡೆ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಗುಡ್ಡ ಕುಸಿತ ಪ್ರದೇಶದಲ್ಲಿ ಸದ್ಯ ರಕ್ಷಣೆ ಕಾರ್ಯ ಕೈಗೊಳ್ಳಲಾಗಿದೆ. ಎಚ್‌ಪಿಸಿಎಲ್‌ನವರೂ ಬಂದಿದ್ದಾರೆ. ಮಂಗಳೂರು ಮತ್ತು ಉಡುಪಿಯ ಅಗ್ನಿಶಾಮಕ ದಳದವರೂ ಕಾರ್ಯಾಚರಣೆಯಲ್ಲಿದ್ದಾರೆ. ಡಾಬಾದ 4 ಸದಸ್ಯರು, ಟ್ಯಾಂಕರ್‌ನ ಮೂವರು ಚಾಲಕರು ಅಪಾಯಕ್ಕೆ ಸಿಲುಕಿದ್ದಾರೆ. ಖಚಿತಗೊಳ್ಳದೆ ಮೃತರ ಸಂಖ್ಯೆ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸಕಲೇಶಪುರದಲ್ಲಿ ಹೆದ್ದಾರಿ ತಡೆಗೋಡೆ ಕುಸಿತ
ಹಾಸನ: ಮಳೆಯ ರಭಸಕ್ಕೆ ಸಕಲೇಶಪುರ ತಾಲೂಕು ಗುಲಗಳಲೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ -75ರಲ್ಲಿ ತಡೆ ಗೋಡೆ ಕುಸಿದಿದೆ. ಸುಮಾರು 40 ಅಡಿಯಷ್ಟು ಎತ್ತರಕ್ಕೆ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ತಡೆಗೋಡೆ ಧರಾಶಾಯಿಯಾಗಿದೆ.

ಭೋರ್ಗರೆಯುವ ಕಪಿಲಾ ನದಿ
ಎಚ್‌.ಡಿ.ಕೋಟೆ: ಕೇರಳದ ವಯನಾಡು ಹಾಗೂ ಕಬಿನಿ ಜಲಾಶಯ ಹಿನ್ನೀರು ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ರೈತರ ಜೀವನಾಡಿ ಕಬಿನಿ ಜಲಾಶ ಯಕ್ಕೆ 30 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು ಜಲಾಶಯದ ನಾಲ್ಕು ಕ್ರಸ್ಟ್‌ ಗೇಟ್‌ಗಳಿಂದ 36 ಸಾವಿರ ಕ್ಯೂಸೆಕ್‌ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ. ಹೆಚ್ಚಿದ ಮಳೆಯಿಂದ ಕಬಿನಿ ನದಿ ಉಕ್ಕಿ ಭೋರ್ಗರೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next