Advertisement

175ಕ್ಕೂ ಹೆಚ್ಚು ವಿದ್ಯುತ್‌ ಕಂಬ ಧರಾಶಾಯಿ

11:04 PM Aug 08, 2019 | mahesh |

ಬೆಳ್ತಂಗಡಿ: ಗಾಳಿ-ಮಳೆಗೆ ತಾಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ತುಂಬಿ ಹರಿದಿದ್ದ ನೇತ್ರಾವತಿ, ಕಪಿಲಾ, ಮೃತ್ಯುಂಜಯ, ಸೋಮಾವತಿ, ಫಲ್ಗುಣಿ ನದಿ ಗುರುವಾರ ಮಳೆ ಕ್ಷೀಣಿಸಿದ್ದರಿಂದ ಶಾಂತರೂಪ ಪಡೆದಿದೆ.

Advertisement

ಕಳೆದ ಎರಡು-ಮೂರು ದಿನಗಳಿಂದ ತಾಲೂಕಿನಾದ್ಯಂತ ಸುಮಾರು 175ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಮೆಸ್ಕಾಂಗೆ 25 ಲಕ್ಷ ರೂ. ನಷ್ಟ ಸಂಭವಿಸಿದೆ. ಜತೆಗೆ 5 ಟ್ರಾನ್ಸ್‌ ಫಾರ್ಮರ್‌ಗಳು ಸಂಪೂರ್ಣ ಹಾನಿಯಾಗಿದ್ದು, 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ರಬ್ಬರ್‌, ಅಡಿಕೆ ಸಹಿತ ಮರಗಳು ಉರುಳಿದ‌ ಪರಿಣಾಮ ಸಬ್‌ಸ್ಟೇಷನ್‌, ರಸ್ತೆ ಬದಿ ಕಂಬಗಳು ಬುಡಸಮೇತ ಬಿದ್ದು ಮಲವಂತಿಗೆ ಆಸುಪಾಸು ಕಳೆದ ಮೂರು ದಿನಗಳಿಂದ ವಿದ್ಯುತ್‌ ಸಮಸ್ಯೆಯಿಂದ ನಲುಗುವಂತಾಗಿದೆ.

ಬಂಗಾಡಿ, ನಾವೂರು, ಇಂದಬೆಟ್ಟು, ಗೇರುಕಟ್ಟೆ, ಶಿಶಿಲ, ಪಟ್ರಮೆ, ಅಳದಂಗಡಿ, ಮಡಂತ್ಯಾರು, ಮಾಲಾಡಿ, ಧರ್ಮಸ್ಥಳ, ಮುಂಡಾಜೆ, ಕಾಜೂರು, ಚಾರ್ಮಾಡಿ ಸಹಿತ ತಾಲೂಕಿನ ವಿವಿಧೆಡೆ 100ಕ್ಕೂ ಹೆಚ್ಚು ಕಂಬಗಳು ಧರೆಗುರುಳಿದ್ದು, ವಿದ್ಯುತ್‌ ಕೈಕೊಟ್ಟಿದ್ದರಿಂದ ಭಾರೀ ಮಳೆ ನಡುವೆ 2 ಬ್ಯಾಚ್‌ಗಳಾಗಿ 15 ಮಂದಿ ಮೆಸ್ಕಾಂ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೆಸ್ಕಾಂ ಎಇಇ ಶಿವಶಂಕರ್‌ ತಿಳಿಸಿದ್ದಾರೆ.

ಎರಡು ದಿನ ಸಂಪರ್ಕ ಕಡಿತ
ಬೆಳ್ತಂಗಡಿಯಲ್ಲಿ ಮಂಗಳವಾರ, ಬುಧವಾರ ಒಟ್ಟು 109.8 ಮಿ.ಮೀ. ಮಳೆಯಾಗಿದ್ದು, ಚಾರ್ಮಾಡಿಯ ಅರಣೆಪಾದೆ ಸಮೀಪದ ಅಂತರ ಎಂಬಲ್ಲಿ ಕಿಂಡಿ ಅಣೆಕಟ್ಟು ಜಲಾವೃತ್ತವಾಗಿತ್ತು. ಪರಿಣಾಮ ಎರಡು ದಿನ ಸಂಪರ್ಕ ಕಡಿತವಾಗಿದೆ. ಕಿಂಡಿ ಅಣೆಕಟ್ಟಲ್ಲಿ ಬೃಹತ್‌ ಮರ ಸಿಲುಕಿಕೊಂಡಿದ್ದರಿಂದ ಸ್ಥಳೀಯ 50ಕ್ಕೂ ಹೆಚ್ಚು ಕುಟುಂಬಗಳು ದಿಗ್ಬಂಧನ ಎದುರಿಸಿತ್ತು. ಸುಮಾರು 4 ಕಿ.ಮೀ. ತೋಟ-ಗದ್ದೆ ಮಧ್ಯೆ ನಡೆದು ಪೇಟೆ ತಲುಪಬೇಕಾದ ಸ್ಥಿತಿ ನಿರ್ಮಾಣವಾಗಿ, ಗುರುವಾರ ನೀರಿನ ಮಟ್ಟ ತಗ್ಗಿದ್ದರಿಂದ ಮರ ತೆರವುಗೊಳಿಸಲಾಗಿದೆ.

ಚಾರ್ಮಾಡಿ ಗ್ರಾಮದ ಗಾಂಧಿನಗರ ನಿವಾಸಿ ಕಲ್ಯಾಣಿ ಅವರ ಮನೆ ಕುಸಿದಿದ್ದು, ಶಾಸಕ ಹರೀಶ್‌ ಪೂಂಜರವರ ವೈಯಕ್ತಿಕ ಪರಿಹಾರ ಧನ 5,000 ರೂ. ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಶೈಲಜಾ ಎಂ., ಸ್ಥಳೀಯರಾದ ಗಣೇಶ್‌ ಕೋಟ್ಯಾನ್‌ ಜತೆಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next