ಧಾರವಾಡ: ಶುಕ್ರವಾರ ರಾತ್ರಿಯಿಡೀ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಮತ್ತೂಮ್ಮೆ ಅಧ್ವಾನ ಸೃಷ್ಟಿಸಿದೆ. ಹಳ್ಳಗಳು ಉಕ್ಕಿ ಹರಿಯುತ್ತಿದ್ದು ರೈತರ ಬೆಳೆಗಳು ಹಾನಿಗೆ ಒಳಗಾಗಿವೆ. ಧಾರವಾಡ ತಾಲೂಕಿನ ತುಪರಿ ಹಳ್ಳ ಮೈದುಂಬಿ ಹರಿಯುತ್ತಿದ್ದು, ಶನಿವಾರ ಇಡೀ ದಿನ ಧಾರವಾಡ-ಸವದತ್ತಿ ರಸ್ತೆಗೆ ಅಡ್ಡಲಾಗಿ ಕಟ್ಟಿರುವ ಇನಾಂಹೊಂಗಲ ಮತ್ತು ಹಾರೋಬೆಳವಡಿ ಮಧ್ಯದ ಸೇತುವೆ ಸಂಪೂರ್ಣ ಜಲಾವೃತವಾಗಿತ್ತು. ಹೀಗಾಗಿ ಇಡೀ ದಿನ ಸವದತ್ತಿ ಮೂಲಕ ಸಂಚರಿಸುವ ಬಸ್ ಮತ್ತು ಖಾಸಗಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನವಲಗುಂದ ತಾಲೂಕಿನ ಶಿರೂರು, ಮೊರಬ, ಗುಮ್ಮಗೋಳ ಮತ್ತು ಶಿರಕೋಳ ಗ್ರಾಮದಲ್ಲಿನ ಹೊಲಗಳಿಗೆ ಏಕಾಏಕಿ ನೀರು ನುಗ್ಗಿತ್ತು. ಶನಿವಾರ ಸಂಜೆ ವೇಳೆಗೆ ಮತ್ತೆ ನೀರು ಕಡಿಮೆಯಾಯಿತು.
ಇನ್ನು ಬೇಡ್ತಿ ಹಳ್ಳ ಮೈದುಂಬಿ ಹರಿಯುತ್ತಿದ್ದು, ತಾಲೂಕಿನ ದೇವಗಿರಿ, ಲಾಳಗಟ್ಟಿ ಗ್ರಾಮಕ್ಕೆ ಬಸ್ ಮತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇನ್ನು ಸಣ್ಣ ಹಳ್ಳ ತೀವ್ರ ಸ್ವರೂಪ ಪಡೆದುಕೊಂಡಿದ್ದ ಕಂಬಾರಗಣವಿ ಗ್ರಾಮಕ್ಕೂ ಬಸ್ ಮತ್ತು ಖಾಸಗಿ ವಾಹನಗಳ ಸಂಚಾರವಿರಲಿಲ್ಲ. ನೀರಸಾಗರ ಕೆರೆಗೆ ಒಳಹರಿವು ಹೆಚ್ಚಿಸುವ ನಾಲ್ಕು ಪ್ರಮುಖ ಹಳ್ಳಗಳಲ್ಲಿ ತೀವ್ರವಾಗಿ ನೀರು ಹರಿದು ಬರುತ್ತಿದ್ದು, ಜಲಾಶಯದ ಕೋಡಿ ಬಿದ್ದು ರಭಸವಾಗಿ ಹರಿಯುತ್ತಿದೆ.
ಜಿಲ್ಲೆಯಲ್ಲಿನ 1200ಕ್ಕೂ ಅಧಿಕ ಕೆರೆಗಳು ಶುಕ್ರವಾರ ಸುರಿದ ಮಳೆಗೆ ಮತ್ತೂಮ್ಮೆ ಕೋಡಿ ಬಿದ್ದಿದ್ದು, ರಭಸವಾಗಿ ನೀರು ಹರಿದು ಹೋಗುತ್ತಿದೆ. ಬೆಣ್ಣೆಹಳ್ಳ ನವಲಗುಂದ ತಾಲೂಕಿನಲ್ಲಿ ಅವಾಂತರ ಸೃಷ್ಟಿಸಿದ್ದು, ಯಮನೂರು ಸುತ್ತಲಿನ ಹೊಲಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ :ಕೆಲಸ ಕೊಡಿಸುವ ನೆಪ: ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಅತ್ಯಾಚಾರ
ಮನೆಗಳು ಜಖಂ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ಮನೆಗಳು ಜಖಂಗೊಂಡಿರುವುದು ವರದಿಯಾಗಿದೆ. ಧಾರವಾಡ ತಾಲೂಕಿನಲ್ಲಿ 8, ಕಲಘಟಗಿ ತಾಲೂಕಿನಲ್ಲಿ 7, ಅಳ್ನಾವರ ತಾಲೂಕಿನಲ್ಲಿ 5 ಸೇರಿ ಒಟ್ಟು 25ಕ್ಕೂ ಹೆಚ್ಚು ಮನೆಗಳು ಜಖಂ ಗೊಂಡಿವೆ.
ಮಳೆಗೆ ಬೆಳೆಹಾನಿ: ಜಿಲ್ಲೆಯಲ್ಲಿ ಕಟಾವಿಗೆ ಬಂದಿರುವ ಸೋಯಾ ಅವರೆ, ಗೋವಿನಜೋಳಕ್ಕೆ ಮಳೆ ತೀವ್ರ ಹಾನಿಯುಂಟು ಮಾಡಿದೆ. ಇನ್ನು ಶೇಂಗಾ ಬೆಳೆ ಸಂಪೂರ್ಣವಾಗಿ ನಾಶವಾಗಿ ಹೋಗಿದ್ದು, ಹಳ್ಳದ ಪಕ್ಕದ ಹೊಲಗಳಿಗೆ ನೀರು ನುಗ್ಗಿದೆ. ಕಲಘಟಗಿ ಮತ್ತು ಅಳ್ನಾವರ ತಾಲೂಕಿನಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದ್ದು, ರೈತರು ಮತ್ತಷ್ಟು ಕಂಗಾಲಾಗಿದ್ದಾರೆ.
ವಾಡಿಕೆಗಿಂತ ದುಪ್ಪಟ್ಟು ಮಳೆ
ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿಯಬೇಕಿದ್ದ ನಿಗದಿತ ಮಳೆಗಿಂತಲೂ ದುಪ್ಪಟ್ಟು ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸೆ. 26ರ ವರೆಗೂ ಸರಾಸರಿ 597 ಮಿಮೀ ಮಳೆಯಾಗಬೇಕಿತ್ತು. ಆದರೆ 919 ಮಿಮೀ ಮಳೆ ಸುರಿದಿದೆ. ಈ ಪೈಕಿ ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದೆ.