ಧರ್ಮಶಾಲಾ: ಭಾರೀ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ಇಲ್ಲಿ ಭಾನುವಾರ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಮಳೆ ನಿಂತೀತು ಎಂದು ಕಾಯುತ್ತಲೇ ಇದ್ದ ಭಾರೀ ಸಂಖ್ಯೆಯ ವೀಕ್ಷಕರು ತೀವ್ರ ನಿರಾಸೆ ಅನುಭವಿಸಿದರು. ಧರ್ಮಶಾಲಾ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಲಿದೆ ಎಂದು ಒಂದು ವಾರದ ಹಿಂದೆಯೇ ಹವಾಮಾನ ಇಲಾಖೆ ಸೂಚಿಸಿತ್ತು. ಹಿಂದಿನ ದಿನಗಳಲ್ಲೇ ಭಾನುವಾರ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿತ್ತು. ಇದು ನಿಜವಾಯಿತು. ಅಪರಾಹ್ನದ ಬಳಿಕ ಗುಡುಗು ಸಹಿತ ಮಳೆ ನಿರಂತರವಾಗಿ ಸುರಿಯುತ್ತಲೇ ಇತ್ತು. ಸಂಜೆ 5.30ರ ವೇಳೆ ವೀಕ್ಷಕರು ಆಗಮಿಸಿದಾಗ ಮೈದಾನವೆಲ್ಲ ಕೆರೆಯಂತಾಗಿತ್ತು.
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಅಂಗಳವನ್ನು ಪಂದ್ಯಕ್ಕೆ ಅಣಿಗೊಳಿಸುವ ಸ್ಥಿತಿಯಲ್ಲಿರಲಿಲ್ಲ. ಕನಿಷ್ಠ 5 ಓವರ್‌ಗಳ ಪಂದ್ಯ ನಡೆಸಲಿಕ್ಕೂ ಮಳೆ ಸಹಕರಿಸಲಿಲ್ಲ.ಸ್ಟೇಡಿಯಂನ ಬಹುತೇಕ ಸ್ಟಾಂಡ್‌ಗಳಿಗೆ ಛಾವಣಿ ಇಲ್ಲದ ಕಾರಣ ವೀಕ್ಷಕರೆಲ್ಲ ಕೊಡೆ ಬಿಡಿಸಿ ನಿಂತಿದ್ದ ದೃಶ್ಯ ಕಂಡುಬಂತು. ದೂರದ ಚಂಡೀಗಢ, ದಿಲ್ಲಿಯಿಂದಲೂ ಕ್ರಿಕೆಟ್ ಅಭಿಮಾನಿಗಳು ಪಂದ್ಯದ ವೀಕ್ಷಣೆಗೆ ಆಗಮಿಸಿದ್ದರು.
ಪಂದ್ಯಕ್ಕೆ ವಿಮೆ, ಮಂಡಳಿಗೆ ನಷ್ಟವಿಲ್ಲ: ಪಂದ್ಯ ರದ್ದಾದರಿಂದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯಾದರೂ ಹಿಮಾಚಲ ಪ್ರದೇಶ ಕ್ರಿಕೆಟ್ ಮಂಡಳಿಗೆ ಇದರಿಂದ ನಷ್ಟವೇನೂ ಆಗಿಲ್ಲ. ಬಿಸಿಸಿಐ ಈಗ ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳಿಗೂ ವಿಮೆ ಮಾಡುತ್ತಿರುವುದೇ ಇದಕ್ಕೆ ಕಾರಣ. ಹೀಗಾಗಿ ವೀಕ್ಷಕರಿಗೆಲ್ಲ ಪೂರ್ಣ ಮೊತ್ತದ ಟಿಕೆಟ್ ಹಣ ಮರಳಿ ದೊರೆಯಲಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ರದ್ದುಗೊಂಡ ಸತತ 2ನೇ ಟಿ20 ಪಂದ್ಯ.
ಹರಿಣಗಳ ಪಡೆ ಕಳೆದ ಸಲ ಭಾರತಕ್ಕೆ ಆಗಮಿಸಿದಾಗ ಕೋಲ್ಕತಾದಲ್ಲಿ ನಡೆದ ಕೊನೆಯ ಪಂದ್ಯವೂ ಮಳೆಯಿಂದ ಕೊಚ್ಚಿ ಹೋಗಿತ್ತು. ಸರಣಿಯ 2ನೇ ಟಿ20 ಪಂದ್ಯ ಬುಧವಾರ ಮೊಹಾಲಿಯಲ್ಲಿ, 3ನೇ ಪಂದ್ಯ ಭಾನುವಾರ (ಸೆ.22) ಬೆಂಗಳೂರಿನಲ್ಲಿ ನಡೆಯಲಿದೆ.