Advertisement
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆಯಂತೆ ಆಗಾಗ್ಗೆ ನಿರಂತರವಾಗಿ ದಟ್ಟ ಮೋಡ ಕವಿದು ಅಬ್ಬರದ ಮಳೆ ಸುರಿದಿದೆ. ಘಟ್ಟದ ತಪ್ಪಲಿನಲ್ಲೂ ಭಾರೀ ಮಳೆಯಾಗಿರುವುದರಿಂದ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದೆ.
ಸುಳ್ಯ, ಕಡಬ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಸಂಪಾಜೆ ಯಲ್ಲಿ ಬಾವಿಯೊಂದು ಕುಸಿದಿದ್ದು, ಬರೆಯೊಂದು ಜರಿದು ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಗಾಯವಾಗಿದೆ. ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನಲ್ಲೂ ದಿನವಿಡೀ ಉತ್ತಮ ಗಾಳಿ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿವೆ. ಬಂಟ್ವಾಳ ತಾಲೂಕಿನಲ್ಲೂ ನಿರಂತರ ಮಳೆ ಯಾಗಿದ್ದು, ಒಂದೆರಡು ಮನೆಗಳಿಗೆ ಹಾನಿಯಾಗಿದೆ. ಮಂಗಳೂರು ನಗರ ಮತ್ತು ಹೊರ ವಲಯದಲ್ಲಿ ಬೆಳಗ್ಗಿನಿಂದ ಬಿಟ್ಟುಬಿಟ್ಟು ಮಳೆಯಾಗಿದೆ. ಬಂಗಾಲ ಕೊಲ್ಲಿಯ ವಾಯವ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಲ ಕೊಲ್ಲಿ, ಒಡಿಸ್ಸಾ ತೀರಕ್ಕೆ ಹೊಂದಿ ಕೊಂಡಂತೆ ಕಡಿಮೆ ಒತ್ತಡ ಪ್ರದೇಶವೂ ನಿರ್ಮಾಣವಾಗಿದೆ ಇದು ಕೂಡ ಮಳೆ ಹೆಚ್ಚಳಕ್ಕೆ ಕಾರಣವಾಗಿದೆ. ಸದ್ಯ ಬುಧವಾರದಿಂದ ಮೂರು ದಿನ ಆರೆಂಜ್ ಅಲರ್ಟ್ ಇದು ಬದಲಾ ವಣೆಯಾಗುವ ಸಾಧ್ಯತೆಯೂ ಇದೆ.
Related Articles
ಸಮುದ್ರದಲ್ಲಿ ಗಂಟೆಗೆ 35-45 ಕಿ.ಮೀ. ನಿಂದ 55 ಕಿ.ಮೀ. ವೇಗದಲ್ಲಿ ತೀವ್ರ ಬಿರುಗಾಳಿಯಿಂದ ಕೂಡಿದ ವಾತಾವರಣ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೂಲ್ಕಿಯಿಂದ ಮಂಗಳೂರು ವರೆಗೆ ಜು.16ರ ರಾತ್ರಿ 11.30ರ ವರೆಗೆ 3.2- 3.5 ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಸಾಗರ ಕಾರ್ಯಾಚರಣೆ ಮತ್ತು ತೀರ ಪ್ರದೇಶ ಲ್ಲಿರುವವರು ಜಾಗರೂಕ ರಾಗಿರುವಂತೆ ಸೂಚಿಸಲಾಗಿದೆ. ಬೈಂದೂರಿನಿಂದ ಕಾಪು ವರೆಗೆ 3.4ರಿಂದ 3.7 ಮೀ. ಎತ್ತರ ಅಲೆಗಳು ಉಂಟಾಗುವ ಸಾಧ್ಯತೆಯಿದ್ದು, ಸಣ್ಣ ಹಡಗುಗಳು ಸಂಚರಿಸದಂತೆ ಸೂಚಿಸಲಾಗಿದೆ.
Advertisement
ಹೆದ್ದಾರಿ ಸಂಚಾರ ನಿಧಾನ ಗತಿಕಲ್ಲಡ್ಕ ಭಾಗದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಯಾಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರವೂ ನಿಧಾನಗತಿಯಲ್ಲಿತ್ತು. ಮಂಗಳೂರಿನ ನಂತೂರು, ಕೆಪಿಟಿ ಜಂಕ್ಷನ್ ನಲ್ಲೂ ವಾಹನಗಳು ಸಾಲು ಗಟ್ಟಿ ನಿಂತು ದಟ್ಟಣೆ ಉಂಟಾಯಿತು. ನೇತ್ರಾವತಿ: ನೀರಿನಮಟ್ಟ ಏರಿಕೆ
ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆ ಯಾಗುತ್ತಿರುವುದರಿಂದ ನೇತ್ರಾವತಿ ಸಹಿತ ಜಿಲ್ಲೆ ಯ ವಿವಿಧ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬಂಟ್ವಾಳದಲ್ಲಿ ಬೆಳಗ್ಗೆ 3 ಮೀ. ಮಟ್ಟ ದಲ್ಲಿ ಹರಿಯುತ್ತಿದ್ದ ನೀರು, ಸಂಜೆ ವೇಳೆಗೆ 6.1 ಮೀ. ಏರಿಕೆಯಾಗಿದೆ. ಬಂಟ್ವಾಳ ದಲ್ಲಿ ಅಪಾಯದ ಮಟ್ಟ 8 ಮೀಟರ್ ಆಗಿದೆ. ದ.ಕ ಜಿಲ್ಲೆಯಲ್ಲಿ ಮಳೆ ಹಾನಿ
ಸೋಮವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ದ.ಕ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆ ಸುರಿದಿದೆ. ಇದೇ ಅವಧಿಯಲ್ಲಿ ಜಿಲ್ಲೆ ಯಲ್ಲಿ 4 ಮನೆಗಳು ಹೆಚ್ಚಿನ ಹಾನಿ ಯಾಗಿದ್ದು, 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪ್ರಸ್ತುತ ಮಂಗಳೂರಿನ ಕಾವೂರು ಮತ್ತು ಕಡಬ ತಾಲೂಕಿ ಸುಬ್ರಹ್ಮಣ್ಯದಲ್ಲಿ ನಲ್ಲಿ ತಲಾ ಒಂದೊಂದು ಪರಿಹಾರ ಕೇಂದ್ರಗಳನ್ನು ತೆರೆಯ ಲಾಗಿದೆ. ಒಟ್ಟು 112 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 5.6 ಕಿ.ಮೀ ನಷ್ಟು ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ವರದಿ ತಿಳಿಸಿದೆ. ಸುಬ್ರಹ್ಮಣ್ಯ: ಕುಮಾರಧಾರಾ ಸ್ನಾನಘಟ್ಟ ಮುಳುಗಡೆ
ಸುಬ್ರಹ್ಮಣ್ಯ: ಘಟ್ಟ ಪ್ರದೇಶ ಹಾಗೂ ಸುಬ್ರಹ್ಮಣ್ಯದಲ್ಲಿ ರವಿವಾರ ರಾತ್ರಿಯಿಂದ ನಿರಂತರ ಭಾರೀ ಮಳೆಯಾದ ಪರಿಣಾಮ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಸೋಮವಾರ ಕುಕ್ಕೆಯ ಸ್ನಾನಘಟ್ಟ ಮುಳುಗಡೆಯಾಗಿದೆ.
ನೀರಿನ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ನದಿ ನೀರಿಗೆ ಇಳಿಯಲು ನಿರ್ಬಂಧಿಸಲಾಗಿದ್ದು, ನದಿ ದಡದಲ್ಲಿ ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿ ತೀರ್ಥ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಹೋಮ್‌ಗಾರ್ಡ್ ಹಾಗೂ ದೇವಸ್ಥಾನದ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ಸೋಮವಾರ ಇಡೀ ದಿನ ಕುಕ್ಕೆ ಪರಿಸರದಲ್ಲಿ ಧಾರಕಾರ ಮಳೆಯಾಗಿದ್ದು, ಪರಿಸರದ ನದಿ, ತೋಡುಗಳು ತುಂಬಿ ಹರಿಯುತ್ತಿವೆ. ಸುಬ್ರಹ್ಮಣ್ಯ ಪೇಟೆ, ಬಳ್ಪ, ಯೇನೆಕಲ್ಲು, ಬಿಳಿನೆಲೆ, ಕೈಕಂಬ, ಕುಲ್ಕುಂದ, ಐನೆಕಿದು ಪರಿಸರದಲ್ಲೂ ನಿರಂತರ ಮಳೆಯಾಗಿದೆ. ಹೆದ್ದಾರಿಗೆ ನುಗ್ಗಿದ ನದಿ ನೀರು !
ಸುಬ್ರಹ್ಮಣ್ಯ: ತೀವ್ರ ಮಳೆಯಿಂದಾಗಿ ಸುಬ್ರಹ್ಮಣ್ಯ- ಮಂಜೇಶ್ವರ ಹೆದ್ದಾರಿ ಜಲಾವೃತಗೊಂಡು ಸಂಚಾರ ಕಡಿತಗೊಂಡಿತು. ಹೆದ್ದಾರಿ ಇಕ್ಕಲೆಗಳಲ್ಲಿ ಭದ್ರತಾ ಸಿಬಂದಿ ಮುಂಜಾಗ್ರತಾ ಕೈಗೊಂಡರು. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಸಾರ್ವ ಜನಿಕರು, ಪ್ರವಾಸಿಗರು ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ. ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ 24×7 ಕಂಟ್ರೋಲ್ ರೂಂ ಟೋಲ್ ಫ್ರೀ ಸಂಖ್ಯೆ 1077 ಅಥವಾ 0824-2442590ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ತುಂಬಿ ಹರಿಯುತ್ತಿರುವ ಕುಮಾರಧಾರಾ, ನೇತ್ರಾವತಿ
ಉಪ್ಪಿನಂಗಡಿ: ಸೋಮವಾರ ಸಂಜೆ ವೇಳೆಗೆ ಜಿಲ್ಲೆಯ ಜೀವ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳಲ್ಲಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡು ಬಂದಿದ್ದು, ನೀರಿನ ಮಟ್ಟವು 27.5 ಮೀಟರ್ ದಾಖಲಾಗಿದೆ. ಆದಾಗ್ಯೂ ಅಪಾಯದ ಮಟ್ಟಕ್ಕಿಂತ 4 ಮೀಟರ್ ಕೆಳಗೆ ನೀರಿನ ಹರಿವು ಇದೆ. ಉಪ್ಪಿನಂಗಡಿಯಲ್ಲಿ ಹವಾಮಾನ ಇಲಾಖೆ ಪ್ರಕಾರ ಜು. 14ರಂದು 4 ಸೆಂ. ಮೀ., 13ರಂದು 2 ಸೆ.ಮೀ., 12ರಂದು 8 ಸೆ.ಮೀ. ಮಳೆ ಸುರಿದಿರುವುದು ದಾಖಲಾಗಿದೆ. ಕುಮಾರಧಾರಾ ಮತ್ತು ನೇತ್ರಾವತಿ ಎರಡೂ ನದಿ ಸಂಗಮ ಸ್ಥಾನದ ಬಳಿಯಲ್ಲಿ ಶಂಭೂರು ಡ್ಯಾಂನವರು ಅಳವಡಿಸದಿರುವ ಅಳತೆ ಮಾಪನದಲ್ಲಿ ದಾಖಲಾಗಿರುವ ಪ್ರಕಾರ ಸೋಮವಾರ ಸಂಜೆಯ ಹೊತ್ತಿನಲ್ಲಿ ನದಿ ಸಮುದ್ರ ಮಟ್ಟದಿಂದ 27 ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದು ಕಂಡು ಬಂದಿದೆ. ಇಲ್ಲಿನ ಅಪಾಯದ 31.5 ಮೀಟರ್ ಆಗಿರುತ್ತದೆ. ಕಾಸರಗೋಡು: ಪ್ರತಾಪನಗರದಲ್ಲಿ ಕ್ವಾಟ್ರಸ್, ಮನೆಗೆ ಹಾನಿ
ಕಾಸರಗೋಡು: ಭಾರೀ ಗಾಳಿ ಮಳೆಗೆ ಮರಗಳು ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಮಂಗಲ್ಪಾಡಿಯ ಪ್ರತಾಪನಗರದಲ್ಲಿ ಸಂಭವಿಸಿದೆ. ಪ್ರತಾಪ ನಗರದ ಪ್ರಧಾನ ರಸ್ತೆಯಲ್ಲಿ ದೇವದಾಸ್ ಶೆಟ್ಟಿ ಅವರ ಕ್ವಾಟ್ರಸ್ ಮೇಲೆ ಮರ ಬಿದ್ದಿದೆ. ಕಟ್ಟಡ ಹಾಗೂ ವಿದ್ಯುತ್ ತಂತಿ ಹಾನಿಗೀಡಾಗಿದೆ. ಇದೇ ಪರಿಸರದಲ್ಲಿ ಇನ್ನೊಂದು ಮರ ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಕಾಸರಗೋಡು ನಗರದ ಪಳ್ಳ ರಸ್ತೆಯಲ್ಲಿರುವ ಗಣಪತಿ ಕಾಮತ್ ಅವರ ಮನೆಗೆ ಹಾನಿಗೀಡಾಗಿದೆ. ಗೋಡೆ ಹಾಗು ಹೆಂಚಿನ ಛಾವಣಿ ಕುಸಿದು ಬಿದ್ದು ಭಾರೀ ನಷ್ಟ ಸಂಭವಿಸಿದೆ. ಕುಂಬಳೆ ಆರಿಕ್ಕಾಡಿ ಕುಂಡಾಪುವಿನ ಸದಾಶಿವ ಅವರ ಸಿಮೆಂಟ್ ಶೀಟ್ ಹಾಸಿದ ಮನೆಗೆ ಮರ ಬಿದ್ದು ಹಾನಿಗೀಡಾಗಿದೆ. ಮರ ಮುರಿದು ಬೀಳುವ ಶಬ್ದ ಕೇಳಿ ಮನೆಯವರು ಹೊರಗೆ ಓಡಿದುದರಿಂದ ಹೆಚ್ಚಿನ ಅಪಾಯ ತಪ್ಪಿದೆ.