ಉಡುಪಿ: ಕಳೆದ 24 ಗಂಟೆಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕರಾವಳಿ ಜಿಲ್ಲೆಗಳು ತತ್ತರಿಸಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ಮನೆಗಳು ಜಲಾವೃತವಾಗಿದೆ. ರಸ್ತೆಗಳ ಮೇಲೆ ನೀರು ತುಂಬಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿ ( ಎನ್ ಎಚ್ 66) ನ ಹಲವೆಡೆ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಕಟಪಾಡಿ ಬಳಿ ಉಡುಪಿಯಿಂದ ಮಂಗಳೂರಿನತ್ತ ತೆರಳುವ ಹೆದ್ದಾರಿಯ ಪೂರ್ವ ಭಾಗದ ಸಂಚಾರ ಬಂದ್ ಆಗಿದ್ದು, ವಾಹನಗಳು ಪಶ್ಚಿಮದಲ್ಲಿ ಭಾಗದಲ್ಲಿ ಹಾದು ಹೋಗುತ್ತದೆ. ಪಡುಬಿದ್ರಿ ಭಾಗದಲ್ಲೂ ರಾ. ಹೆದ್ದಾರಿಯ ಇಕ್ಕೆಲಗಳು ತುಂಬಿದ್ದು, ಇನ್ನೂ ಎರಡು ಗಂಟೆಗಳ ಕಾಲ ಮಳೆ ಸುರಿದರೆ ಸಂಚಾರ ಸಂಪೂರ್ಣ ಸ್ಥಗಿತವಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ
ಕಟಪಾಡಿ ಕಲ್ಲಾಪುವಿನಲ್ಲಿ ನಿನ್ನೆಯಿಂದ ಸುರಿದ ಬಾರಿ ಮಳೆಯಿಂದ ರಾ. ಹೆದ್ದಾರಿ ನೀರಿನಿಂದ ಮುಳುಗಲು ಆರಂಭ ಆಗಿದೆ. ಮಣಿಪುರ, ಉದ್ಯಾವರ ಮಠದ ಕುದ್ರು ಅಂಕುದ್ರು, ಈಂದ್ ಬೈಲ್, ಬೊಳಜೆ ನದಿ ಪಾತ್ರದಲ್ಲಿ ಮನೆಗಳ ಸುತ್ತ ನೀರು ನಿಂತಿದ್ದು, ಪರಿಸರ ಜಲದಿಗ್ಬಂಧನ ಪರಿಸ್ಥಿತಿ ಎದುರಿಸುತ್ತಿದೆ. ಉದ್ಯಾವರದ ಮಠದ ಬಳಿ 21 ಮನೆಗಳ ಮಂದಿ ಸ್ಥಳಾಂತರ ಕೊಳ್ಳುತ್ತಿದ್ದಾರೆ.
ಮಾಜಿ ಸಚಿವ ವಸಂತ ಸಾಲ್ಯಾನ್, ಜಿಲ್ಲಾ ಪಂಚಾಯತಿ ಸದಸ್ಯ ಶಿಲ್ಪ ಸುವರ್ಣ ಅವರ ಮನೆಗಳು ಜಲಾವೃತವಾಗಿದ್ದು, ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದೆ.
ಕಾಪು ತಾಲೂಕಿನ ವಿವಿಧೆಡೆ ನೆರೆ ಹಾವಳಿಯಿದ್ದು, ತಗ್ಗು ಪ್ರದೇಶಗಳು ಮಾತ್ರವಲ್ಲದೇ ಮಳೆ ನೀರು ಹರಿಯುವ ಪ್ರದೇಶಗಳು ಮುಳುಗಡೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕುಂಜೂರು ದೇಗುಲದೊಳಗೆ ನೀರು ನುಗ್ಗಿದ್ದು, ರೈಲ್ವೇ ಟ್ರ್ಯಾಕ್ ನ ಪೂರ್ವ ದಿಕ್ಕಿನ ಬೈಲ್ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.
ಉಡುಪಿ- ದ. ಕನ್ನಡ ಜಿಲ್ಲಾ ಗಡಿ ಭಾಗದ ಸಂಕಲಕರಿಯ ಶಾಂಭವಿ ನದಿ ತುಂಬಿ ಹರಿಯುತ್ತಿದ್ದು, ಸಂಕಲಕರಿಯ, ಮುಂಡ್ಕೂರು, ಏಳಿಂಜೆ, ಉಳೆಪಾಡಿ ಭಾಗದ ಕೃಷಿ ಭೂಮಿ ಜಲಾವೃತವಾಗಿದೆ. ಸಂಕಲಕರಿಯ ಮೇರಿ ರೋಮನ್ ಸೆರಾವೋ, ಕಂಡಿಗ ಅಶೋಕ ಶೆಟ್ಟಿ, ಭಾಸ್ಕರ ಶೆಟ್ಟಿ, ಲಿಡಿಯಾ, ಸುಧಾಕರ ಸಾಲ್ಯಾನ್, ದೊಡ್ಡಣ್ಣ ಶೆಟ್ಟಿ, ಸಾಧು ಮೂಲ್ಯ, ಚಂದ್ರಹಾಸ ಮತ್ತಿತರರ ಬೆಳೆ ಹಾನಿಯಾಗಿದ್ದು, ಕಾರ್ಕಳ ತಹಶೀಲ್ದಾರರಿಗೆ ಮೊರೆಯಿಡಲಾಗಿದೆ. ಮುಂಡ್ಕೂರು ದೊಡ್ಡಮನೆ ಕಲ್ಲಾಡಿ ನಾಗಬನ ಜಲಾವೃತವಾಗಿದೆ.
ಮೂಡುತೋಟ ಸಮೀಪದ ಮನೆಯೊಂದರಲ್ಲಿ ಸುಮಾರು 10 ಜನರು ವಾಸವಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಗದ್ದೆ ಹಾಗೂ ತೋಡುಗಳು ತುಂಬಿ ಹರಿಯುತ್ತಿದೆ. ಸಂಪೂರ್ಣ ಮನೆ ಜಲಾವೃತವಾಗಿದ್ದು, ಹಗ್ಗ ಬಳಸಿ ಮನೆಯವರನ್ನು ರಕ್ಷಿಸಿಸಲು ಪ್ರಯತ್ನಿಸಲಾಗುತ್ತಿದೆ.
ಉಡುಪಿ ಗುಂಡಿಬೈಲು ಭಾಗ ಸಂಪೂರ್ಣ ಜಲಾವೃತ್ತವಾಗಿದ್ದು, ಸ್ಥಳದಿಂದ ಹೊರಬರಲು ಸ್ಥಳೀಯರು ದೋಣಿಗಾಗಿ ಎದುರು ನೋಡುತ್ತಿದ್ದಾರೆ. ಉಡುಪಿ ನಗರದ ಗುಂಡಿಬೈಲು ಕಲ್ಸಂಕ ರೋಡ್ ಬಂದ್ಆಗಿದೆ. ಬೈಲ್ ಕೆರೆ ಮಠದ ಬೆಟ್ಟು, ಉಡುಪಿ- ಮಣಿಪಾಲ್ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ.
ಶಾಸಕರ ನಿಧಿಯಿಂದ ಇತ್ತೀಚೆಗೆ ನೀಡಲಾದ ಬೋಟ್ ಮೂಲಕ ಪಲಿಮಾರಿನಲ್ಲಿ ನೆರೆ ಹಾವಳಿ ಸಂತ್ರಸ್ತರನ್ನು ರಕ್ಷಿಸಲಾಯಿತು.