ಕೊಡಗು/ಕೊಪ್ಪ: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರವೂ ಧಾರಾಕಾರ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿಗೆ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಮಡಿಕೇರಿ ಸಂಪರ್ಕಿಸುವ ಎಲ್ಲಾ ರಸ್ತೆಗಳು ಬಂದ್ ಆಗಿದೆ. ಕೊಪ್ಪ ತಾಲೂಕಿನಲ್ಲಿ ಮೂರು ಮನೆ ಕುಸಿದು ಬಿದ್ದಿದ್ದು, ಯಡಕುಮೇರಿಯಲ್ಲಿ ಗುಡ್ಡ ಕುಸಿದ ಪರಿಣಾಮ 16 ಮಂದಿ ರೈಲ್ವೆ ಸಿಬ್ಬಂದಿಗಳ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅಪಾಯದಲ್ಲಿ ನೂರಾರು ಮಂದಿ:
ಕೊಡಗಿನಲ್ಲಿ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಹರಸಾಹಸಪಡುವಂತಾಗಿದೆ. ಮುಕ್ಕೋಡುವಿನಲ್ಲಿ 30ಕ್ಕೂ ಹೆಚ್ಚು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ ಎಂದು ವರದಿ ತಿಳಿಸಿದೆ. ದೇವಸ್ತೂರಿನಲ್ಲಿ 50 ಮಂದಿ ಹೀಗೆ ಹಲವು ಪ್ರದೇಶಗಳಲ್ಲಿ ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಕಂದಕಕ್ಕೆ ಮಕ್ಕಳ ಆಟಿಕೆ ರೀತಿ ಜಾರಿ ಹೋದ ಮನೆ!
ಮಡಿಕೇರಿ ನಗರದ ಮುತ್ತಪ್ಪ ದೇವಾಲಯದ ಬಳಿ ರಫೀಕ್ ಅವರಿಗೆ ಸೇರಿದ ಒಂದು ಅಂತಸ್ತಿನ ಮನೆ ಗುರುವಾರ ಬೆಳಗ್ಗೆ ಅಡಿಪಾಯ ಸಹಿತ ನೂರು ಅಡಿ ಆಳ ಕಂದಕಕ್ಕೆ ಜಾರಿ ಹೋಗಿದೆ. ಈ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವಘಡದ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆಯವರು ಮೊದಲೇ ಸ್ಥಳಾಂತರಗೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಕೊಪ್ಪದಲ್ಲಿ ಮೂರು ಮನೆ ಕುಸಿತ:
ಮಲೆನಾಡಿನಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದ್ದು, ಕೊಪ್ಪದ ಮೇಗೂರು, ಹೇರೂರಿನಲ್ಲಿ ಮೂರು ಮನೆ ಕುಸಿದಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
16 ಮಂದಿ ರೈಲ್ವೆ ಸಿಬ್ಬಂದಿಗಳ ರಕ್ಷಣೆಗಾಗಿ ಕಾರ್ಯಾಚರಣೆ:
ಭಾರೀ ಮಳೆಯಿಂದಾಗಿ ಹಳಿ ಮೇಲೆ ಗುಡ್ಡ ಕುಸಿಯುತ್ತಿದ್ದು, ಈ ಸಂದರ್ಭದಲ್ಲಿ ಯಡಕುಮೇರಿಯಲ್ಲಿ 16 ಮಂದಿ ರೈಲ್ವೆ ಸಿಬ್ಬಂದಿಗಳು ಅಪಾಯದಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸಲು ಟ್ರಕ್ಕಿಂಗ್ ಪರಿಣತರೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.