ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದೆ. ನದಿಗಳು ಮೈತುಂಬಿ ಹರಿಯುತ್ತಿದೆ. ಸತತ ಮಳೆಯಿಂದಾಗಿ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದೆ.
ಈ ಹೆಬ್ಬಾಳೆ ಸೇತುವೆ ಕಳಸ ಪಟ್ಟಣದಿಂದ ಹೊರನಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕುದುರೆಮುಖ ಸುತ್ತಮುತ್ತ ಮಳೆ ಬಿಟ್ಟು ಬಿಡದೆ ಸುರಿಯುತ್ತಿರುವ ಹಿನ್ನೆಲೆ ಭದ್ರಾ ನದಿಯು ಮೈದುಂಬಿ ಹರಿಯುತ್ತಿದೆ.
ಇದನ್ನೂ ಓದಿ:ಬೋರ್ ವೆಲ್ ರಿಪೇರಿ ಮಾಡಲು ಹೋದ ಇಬ್ಬರು ವಿದ್ಯುತ್ ಆಘಾತದಿಂದ ಸಾವು
ಭಾರಿ ಮಳೆಯಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಮುಗ್ರಹಳ್ಳಿ ಸೇತುವೆ ಕುಸಿಯುವ ಹಂತ ತಲುಪಿದೆ. ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯ ಸೇತುವೆ ಕುಸಿಯುವ ಆತಂಕದಲ್ಲಿ ಮೂಡಿಸಿದೆ. ಸತತ ಮಳೆಯ ಕಾರಣ ಕಳೆದ 3 ದಿನಗಳಿಂದ ವಿದ್ಯುತ್ ಇಲ್ಲದೆ ಜನರ ಪರದಾಟ ಪಡುವಂತಾಗಿದೆ.
ನಿಡುವಾಳೆ ಆಸ್ಪತ್ರೆ ಮುಂಭಾಗದಲ್ಲಿ ಭಾರೀ ಗಾಳಿ-ಮಳೆಗೆ ಬೃಹತ್ ಮರವೊಂದು ಧರೆಗುರುಳಿದೆ. ಮೂಡಿಗೆರೆ ತಾಲ್ಲೂಕಿನ , ಕೊಟ್ಟಿಗೆಹಾರ, ಬಣಕಲ್, ಬಾಳೂರುನಲ್ಲಿ ಭಾರೀ ಗಾಳಿ-ಮಳೆಯಾಗುತ್ತಿದೆ.
ಜೀವಕಳೆ ಪಡೆದ ಜಲಪಾತಗಳು: ಸತತ ಮಳೆಯಿಂದ ಜಿಲ್ಲೆಯ ಜಲಪಾತಗಳು ಜೀವಕಳೆ ಪಡೆದುಕೊಂಡಿದೆ. ಚಾರ್ಮಾಡಿ ಘಾಟಿಯಲ್ಲಿರುವ ನೂರಾರು ಝರಿಗಳು ಹಾಲ್ನೋರೆಯಂತೆ ಧುಮ್ಮಿಕ್ಕುತ್ತಿದ್ದು ಪ್ರಕೃತಿ ಸೌಂದರ್ಯ ಹೆಚ್ಚಿಸಿದೆ.