Advertisement
ಉತ್ತರ ಕರ್ನಾಟಕದಾದ್ಯಂತ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ವಿಜಯನಗರ ಜಿಲ್ಲೆ ಸಂಡೂರು ತಾಲೂಕಿನ ವಿಠಲಾಪುರ ಗ್ರಾ.ಪಂ. ವ್ಯಾಪ್ತಿಯ ತಿಮ್ಮಲಾಪುರದ ಸೇತುವೆ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಅಡವಿ ಹುಲಗಬಾಳ-ಅಡವಿ ಹುಲಗಬಾಳ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ದಾವಣಗೆರೆ ತಾಲೂಕಿನಲ್ಲಿ ಅಣಜಿ ಹಳ್ಳ ರಭಸವಾಗಿ ಹರಿದ ಪರಿಣಾಮ ನಾಲ್ಕು ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿವೆ. ಹುಣಸೇಕಟ್ಟೆ ಗ್ರಾಮದ ಶೇಖರಪ್ಪ ಅವರು ನಾಲ್ಕು ಎಕ್ರೆಯಲ್ಲಿ ಬೆಳೆದಿದ್ದ ಟೊಮೆಟೊ, ಮೆಣಸಿನಕಾಯಿ ನೀರಿನಲ್ಲಿ ಕೊಚ್ಚಿ ಹೋಗಿವೆ. ಅಡಿಕೆ ತೋಟಗಳಿಗೂ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಬಳ್ಳಾರಿಯಲ್ಲಿ 18, ವಿಜಯನಗರದಲ್ಲಿ 9 ಮನೆಗಳು ಬಿದ್ದಿವೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ತೋಗುಣಶಿ ತಾಂಡಾ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.
ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ತುಂಗಾ, ಭದ್ರಾ, ಹೇಮಾವತಿ, ತುಂಗಭದ್ರಾ, ಅಘನಾಶಿನಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯಿಂದ ಉಪ ಕಾಲುವೆಗಳಿಗೆ ನೀರು ಹರಿದು ಬರುತ್ತಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದ ಪುರಾತನ ಕಾಲದ ಬೃಹತ್ ಆಲದ ಮರವೊಂದು ಪಕ್ಕದ ಮನೆಗಳ ಮನೆ ಮೇಲೆ ಮುರಿದು ಬಿದ್ದಿದೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಸಿಡಿಲಿಗೆ ಟಗರು ಹಾಗೂ ಎತ್ತು ಬಲಿಯಾಗಿವೆ. ಕಬಿನಿ ಒಳ ಹರಿವು ಹೆಚ್ಚಳ
ವಯನಾಡು ಪ್ರಾಂತ್ಯದಲ್ಲಿ ಧಾರಾಕಾರ ಮಳೆಯಾದ್ದರಿಂದ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಮತ್ತೆ ಹೆಚ್ಚಾಗಿದ್ದು, ಸೋಮವಾರ ಬೆಳಗ್ಗೆ 1178 ಕ್ಯೂಸೆಕ್‌ಗೆ ಏರಿ ಕೆ ಯಾ ಗಿದೆ. ಮೇ 3ನೇ ವಾರದಲ್ಲಿ ಒಳ ಹರಿವಿನ ಪ್ರಮಾಣ 6 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಈಗ ಮತ್ತೆ ಒಳ ಹರಿವು ಪ್ರಮಾಣ ಏರಿಕೆಯಾಗಿದೆ.