ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಆಗುತ್ತಿರುವ ಮಳೆಗೆ ಸೋಮವಾರ ಸುಬ್ರಹ್ಮಣ್ಯ ಕುಮಾರಧಾರಾ ಸ್ನಾನಘಟ್ಟ ಬಹುತೇಕ ಭಾಗ ಮುಳುಗಡೆಗೊಂಡಿದೆ. ನಿರಂತರ ಮಳೆಯಿಂದ ಕುಮಾರಧಾರೆ ನದಿಯ ಹರಿವು ಹೆಚ್ಚಿದ್ದು, ನೆರೆಯಿಂದ ತುಂಬಿ ಹರಿಯುತ್ತಿದೆ. ಸೋಮವಾರ ಬೆಳಗ್ಗೆ 10ರ ಹೊತ್ತಿಗೆ ಸ್ನಾನಘಟ್ಟವು ಭಾಗಶಃ ಮುಳುಗಡೆಗೊಂಡಿತ್ತು. ಇದರಿಂದ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಸ್ನಾನಘಟ್ಟದ ದಡದ ಮೇಲ್ಭಾಗದಲ್ಲಿ ನಿಂತ ನೆರೆ ನೀರಲ್ಲಿ ತೀರ್ಥ ಸ್ನಾನ ಪೂರೈಸಿಕೊಂಡರು. ಸ್ನಾನ ಘಟ್ಟದ ಮೇಲಿನ ಭಾಗದಲ್ಲಿ ಭಾರಿ ಮಳೆ ಆಗಿರುವುದು ನೆರೆ ಹೆಚ್ಚಳಕ್ಕೆ ಕಾರಣವಾಗಿದೆ. ಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ದಿನವಿಡಿ ಭಾರಿ ಮಳೆ ಆಗಿದ್ದು, ಮಧ್ಯಾಹ್ನ ಬಳಿಕ ಮಳೆ ವೇಗ ಪಡೆದು ಕೊಂಡಿದೆ. ಇದರಿಂದ ನದಿಯಲ್ಲಿ ನೀರಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚಳವಾಗುತ್ತಿದೆ.
Advertisement
ಹಳೆ ಸೇತುವೆ ಮೇಲೆ ಸಂಚಾರ ನಿಷೇಧ ಅವಶ್ಯಕುಮಾರಧಾರ ನದಿಗೆ ನೂತನ ಸೇತುವೆ ನಿರ್ಮಾಣವಾದ ಬಳಿಕ ಸೇತುವೆ ಮುಳುಗಡೆ ಭೀತಿ ಇಲ್ಲ. ಹೀಗಿದ್ದರೂ ಈ ಹಿಂದೆ ಮಳೆಗಾಲ ಮುಳುಗೇಳುತ್ತಿದ್ದ ಹಳೆ ಸೇತುವೆ ಮುಕ್ತವಾಗಿದೆ. ಸೇತುವೆ ಎರಡು ಬದಿ ಸಂಚಾರ ಬಂದ್ ಮಾಡಿಲ್ಲ. ಇದರಿಂದ ನೆರೆ ನೋಡಲೆಂದು ಸ್ಥಳಿಯರು ಕ್ಷೇತ್ರಕ್ಕೆ ಬಂದ ಭಕ್ತರು ಹಳೆ ಸೆತುವೆ ಮೇಲೆ ತೆರಳುತ್ತಿದ್ದು ಅಪಾಯದ ಸನ್ನಿವೇಶ ಇದೆ. ಬಳಕೆಯಾಗದೆ ಈ ಸೇತುವೆಯಲ್ಲಿ ಸಂಚಾರ ನಿಷೇದಿಸುವ ಅವಶ್ಯಕತೆ ಇದೆ. ಸೋಮವಾರ ನೆರೆಗೆ ಈ ಸೇತುವೆಯೂ ಮುಳುಗಡೆಗೊಂಡಿದೆ. ಸುಬ್ರಹ್ಮಣ್ಯ ಪರಿಸರದ ಗ್ರಾಮೀಣ ಪರಿಸರದ ಹಳ್ಳಕೊಳ್ಳಗಳು ಕೂಡ ಮಳೆಯ ಅಬ್ಬರಕ್ಕೆ ತುಂಬಿ ಹರಿಯುತ್ತದೆ. ಗ್ರಾಮೀಣ ಪ್ರದೇಶ ಬಾಳುಗೋಡು ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, ಏನೆಕಲ್, ನಿಂತಿಕಲ್, ಬಿಳಿನೆಲೆ, ನೆಟ್ಟಣ ಮುಂತಾದ ಕಡೆ ಕೂಡ ನದಿ ತೊರೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೆರೆ ನೀತು ನುಗ್ಗಿದೆ.
ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕ್ಷೇತ್ರಕ್ಕೆ ಸಂಪರ್ಕಿಸುವ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಸುಳ್ಯ-ಸುಬ್ರಹ್ಮಣ್ಯ, ಪುತ್ತೂರು- ಕಾಣಿಯೂರು-ಸುಬ್ರಹ್ಮಣ್ಯ ಮಾರ್ಗದ ಬರುವ ಪ್ರಮುಖ ಹಾಗೂ ಕಿರು ಸೇತುವೆಗಳು ಅಲ್ಲಲ್ಲಿ ಮುಳುಗಡೆ ಆದ ಪರಿಣಾಮ ಸಂಚಾರದಲ್ಲಿ ಭಾರಿ ವ್ಯತ್ಯಯಗಳು ಉಂಟಾಗಿವೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ಬಸ್ ಸಂಚಾರ ಇಲ್ಲದೆ ಯಾತ್ರಾರ್ಥಿಗಳು ಊರಿಗೆ ತೆರಳಲು ಭಾರಿ ಸಂಕಟ ಅನುಭವಿಸಿದರು. ಸಂಜೆ ವೇಳೆಗೆ ಭಾರಿ ಗಾಳಿ ಮಳೆ ಆಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಹುತೇಕ ಭಕ್ತರು ಊರಿಗೆ ಮರಳಲು ಸಾಧ್ಯವಾಗದೆ ಕ್ಷೇತ್ರದಲ್ಲೆ ಆಶ್ರಯ ಪಡೆದರು. ಪೊಲೀಸರ ತೀವ್ರ ನಿಗಾ
ಭಕ್ತರು ಸ್ನಾನ ಮಾಡಲು ನದಿಗೆ ಇಳಿಯದಂತೆ ಸುಬ್ರಹ್ಮಣ್ಯ ಪೊಲೀಸರು ಭಕ್ತರಿಗೆ ಸೂಚನೆ ನೀಡುತ್ತಿದ್ದರು. ಆದರೆ ಅದನ್ನು ಲೆಕ್ಕಿಸದೆ ಭಕ್ತರು ನದಿಯಂಚಿಗೆ ತೆರಳಿ ತೀರ್ಥ ಸ್ನಾನ ನೆರವೇರಿಸಲು ಮುಂದಾಗುತಿದ್ದರು. ಭಕ್ತರ ನಿಯಂತ್ರಣಕ್ಕೆ ಕರ್ತವ್ಯ ನಿರತ ಸಿಬಂದಿ ಹರಸಾಹಸವನ್ನೆ ಪಡಬೇಕಾಯಿತು. ಸ್ನಾನ ಘಟ್ಟ ಮುಳುಗಡೆಗೊಂಡ ಹಿನ್ನಲೆಯಲ್ಲಿ ಹಾಗೂ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಆಗಾಗ್ಗೆ ಸ್ನಾನ ಘಟ್ಟ ಬಳಿ ತೆರಳಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲಿಸುತ್ತಿದ್ದರು.
Related Articles
ಮೈದುಂಬಿ ಹರಿಯುತ್ತಿರುವ ನೇತ್ರಾವತಿಯಲ್ಲಿ ರಕ್ಷಣೆ ಕಾರ್ಯದಲ್ಲಿ ನಿರತರಾದ ಸಿಬಂದಿ.
ಉಪ್ಪಿನಂಗಡಿ: ನೇತ್ರಾವತಿ- ಕುಮಾರಧಾರ ನದಿಗಳಲ್ಲಿ ಸಂಜೆಯಾಗುತ್ತಲೇ ನೀರಿನ ಪ್ರಮಾಣ ಸ್ವಲ್ಪ ಇಳಿಕೆಯಾಗಿದ್ದು, ಮಧ್ಯಾಹ್ನವಿದ್ದ ನೆರೆಯ ಆತಂಕ ಸಂಜೆಯಾಗುತ್ತಲೇ ಕಡಿಮೆಯಾಗಿದೆ. ರವಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ಉಪ್ಪಿನಂಗಡಿಯಲ್ಲಿ 80.6 ಮಿ.ಮೀ. ಮಳೆಯಾಗಿದ್ದು, ನದಿ ಉಗಮ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರಿಂದ ಮಧ್ಯಾಹ್ನ ನೇತ್ರಾವತಿ ನದಿ ನೀರಿನ ಮಟ್ಟ 24.6 ಮೀಟರ್ ತಲುಪಿತ್ತು. ಇಲ್ಲಿ ಅಪಾಯದ ಮಟ್ಟ 26.5 ಮೀಟರ್ ಆಗಿದ್ದು, ಈಗ ನದಿಯಲ್ಲಿ ವ್ಯತ್ಯಾಸವಾಗಿದ್ದರಿಂದ ಅಪಾಯದ ಮಟ್ಟ ತಲುಪಲು ಸುಮಾರು 30 ಮೀಟರ್ ನೀರು ಬರಬೇಕು.
Advertisement
ನೀರು ಇಳಿಮುಖಇಂದು ಬೆಳಗ್ಗಿನಿಂದ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇತ್ತು. ಕುಮಾರಧಾರಾ ನದಿಯಲ್ಲಿ ಹೆಚ್ಚಿನ ನೀರು ಬಂದಿದ್ದು, ಸಂಗಮ ಕ್ಷೇತ್ರದಲ್ಲಿ ರಭಸವಾಗಿ ಹಾಗೂ ನೇರವಾಗಿ ಹರಿಯುವ ನೇತ್ರಾವತಿ ನದಿಯಿಂದಾಗಿ ಕುಮಾರಧಾರ ನದಿಯ ನೀರಿನ ಸರಾಗ ಹರಿಯುವಿಕೆಗೆ ತಡೆಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಶ್ರೀ ಮಹಾಕಾಳಿ ದೇವಾಲಯದ ನದಿಗಿರುವ 40 ಮೆಟ್ಟಿಲುಗಳಲ್ಲಿ 12 ಮೆಟ್ಟಿಲುಗಳು ಮಾತ್ರ ಕಾಣಿಸುತ್ತಿದ್ದರೆ, ಸಂಜೆಯಾಗುತ್ತಲೇ ನೀರು ಇಳಿಕೆಯಾಗಿ 13 ಮೆಟ್ಟಿಲುಗಳು ಕಾಣತೊಡಗಿದವು. ಪರಿಸ್ಥಿತಿಯ ಅವಲೋಕನ
ದೇವಾಲಯದ ಬಳಿ ಗೃಹರಕ್ಷಕ ದಳದ ವಿಪತ್ತು ನಿರ್ವಹಣಾ ಪಡೆಯು ದೋಣಿಯೊಂದಿಗೆ ಮೊಕ್ಕಾಂ ಹೂಡಿದ್ದಾರೆ. ಉಪ್ಪಿನಂಗಡಿ ಪ್ರಭಾರ ಗ್ರಾಮಕರಣಿಕ ಚಂದ್ರ ನಾಯ್ಕ, ಗ್ರಾಮ ಸಹಾಯಕ ಯತೀಶ್ ಹಾಗೂ ಪೊಲೀಸ್ ಸಿಬಂದಿ ಸ್ಥಳದಲ್ಲಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. ರವಿವಾರ ರಾತ್ರಿ ದೇವಾಲಯದ ಬಳಿ ಭೇಟಿ ನೀಡಿ ವೀಕ್ಷಿಸಿದ್ದರು. ಎರಡು ಕುಟುಂಬ ಗಂಜಿ ಕೇಂದ್ರಕ್ಕೆ ರವಾನೆ
ಕುಮಾರಧಾರಾ ನದಿ ದಡದಲ್ಲಿರುವ ಖಾಸಗಿ ಜಾಗವೊಂದರಲ್ಲಿ ತಾತ್ಕಾಲಿಕ ಟೆಂಟ್ ಹಾಕಿ ವಾಸ್ತವ್ಯ ಹೂಡಿದ್ದ ಎರಡು ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಿ ಗಂಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಕುಮಾರಧಾರ ಸೇತುವೆಯ ಸಮೀಪದ ಖಾಸಗಿ ಜಾಗವೊಂದರಲ್ಲಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಶೆಡ್ ನಲ್ಲಿ ಕೋಡಿಂಬಾಡಿ ಹಾಗೂ ಕೆಮ್ಮಾರದ ಎರಡು ಕುಟುಂಬಗಳು ಟಾರ್ಪಾಲಿನ್ ಟೆಂಟ್ ಹಾಕಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿದ್ದರು. ಈ ಶೆಡ್ ನ ಒಂದು ಬದಿಯಿಂದ ನದಿ ನೀರು ಆವರಿಸುತ್ತಿರುವುದನ್ನು ಕಂಡ ಅಲ್ಲಿಗೆ ಭೇಟಿ ನೀಡಿದ ಗ್ರಾಮ ಕರಣಿಕ ಚಂದ್ರ ನಾಯ್ಕ ಹಾಗೂ ಗ್ರಾಮ ಸಹಾಯಕ ಯತೀಶ್ ಅವರಿಗೆ ಅಲ್ಲಿ ಎರಡು ಕುಟುಂಬಗಳು ವಾಸ್ತವ್ಯವಿರುವುದು ಕಂಡು ಬಂತು. ಕೂಡಲೇ ಅವರನ್ನು ಗಂಜಿ ಕೇಂದ್ರಕ್ಕೆ ತೆರಳಲು ಅವರು ಸೂಚಿಸಿದರು. ಆದರೆ ಅವರು ಒಪ್ಪದಿದ್ದಾಗ ಪೊಲೀಸರ ಸಹಾಯದಿಂದ ಅವರನ್ನು ಅಲ್ಲಿಂದ ತೆರವುಗೊಳಿಸಿ, ಉಪ್ಪಿನಂಗಡಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಬಿಳಿನೆಲೆ ಸೇತುವೆ ಮೇಲೆ ನೆರೆನೀರು
ಕಡಬ: ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯ ಬಿಳಿನೆಲೆ ಸೇತುವೆಯ ಮೇಲೆ ನೆರೆನೀರು ಹರಿದು ಕೆಲವು ತಾಸುಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಧರ್ಮಸ್ಥಳ -ಸುಬ್ರಹ್ಮಣ್ಯ ನಡುವೆ ಸಂಚರಿ ಸುವ ಯಾತ್ರಾರ್ಥಿಗಳ ವಾಹನಗಳು, ಇತರ ವಾಹನಗಳು ಸಂಚಾರ ಮುಂದುವರಿಸಲು ಸಾಧ್ಯವಾಗಿಲ್ಲ. ಸಂಜೆಯ ಹೊತ್ತಿಗೆ ನೆರೆನೀರು ಇಳಿಮುಖವಾದರೂ ನೀರಿನೊಂದಿಗೆ ತೇಲಿಬಂದ ಮರದ ದಿಮ್ಮಿ ಸೇತುವೆಯ ಮೇಲೆ ಸಿಲುಕಿಕೊಂಡಿದ್ದ ಕಾರಣ ವಾಹನ ಸಂಚಾರಕ್ಕೆ ತಡೆಯಾಗಿತ್ತು. ಬಳಿಕ ಕಂದಾಯ ಇಲಾಖಾ ಸಿಬಂದಿ ಶ್ರೀರಾಜ್ ಹಾಗೂ ಶ್ರೀನಿವಾಸ್ ಅವರು ಜೆಸಿಬಿ ಯಂತ್ರ ತರಿಸಿ ಮರದ ದಿಮ್ಮಿಯನ್ನು ಸೇತುವೆಯಿಂದ ತೆರವುಗೊಳಿಸಿದ ಬಳಿಕ ರಸ್ತೆ ಸಂಚಾರ ಪುನರಾರಂಭಗೊಂಡಿತು. 399. 4 ಮಿ. ಮೀ. ಮಳೆ
ಪುತ್ತೂರು: ಕಳೆದ 24 ಗಂಟೆಗಳ ಅವಧಿಯಲ್ಲಿ ಪುತ್ತೂರು ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ನಿರಂತರ ಸಾಧಾರಣ ಮಳೆಯಾಗಿದೆ. ರವಿವಾರ ರಾತ್ರಿ ಇಡೀ ಮಳೆ ಸುರಿದಿದೆ. ಸಿಡಿಲು ರಹಿತ, ಗಾಳಿ ಸಹಿತ ಸುರಿದ ಮಳೆ ಹಳ್ಳ, ಹೊಳೆಗಳಲ್ಲಿ ನೀರಿನ ಹರಿವು ಜೋರಾಗಿದೆ. ತಾಲೂಕಿನ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಗುರುವಾರದಿಂದ ಶುಕ್ರವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ 66.56 ಮಿ.ಮೀ. ಸರಾಸರಿ ಮಳೆ ಸುರಿದಿತ್ತು. ನಗರದಲ್ಲಿ 14.00 ಮಿ. ಮೀ. ಉಪ್ಪಿನಂಗಡಿಯಲ್ಲಿ 80 ಮಿ.ಮೀ., ಶಿರಾಡಿಯಲ್ಲಿ 112.4 ಮಿ.ಮೀ, ಕೊಯಿಲದಲ್ಲಿ 50 ಮಿ.ಮೀ, ಐತೂರುನಲ್ಲಿ 80 ಮಿ.ಮೀ., ಕಡಬದಲ್ಲಿ 64. 4 ಮಿ.ಮೀ. ಸೇರಿ ತಾಲೂಕಿನಾದ್ಯಂತ ಒಟ್ಟು 399.4 ಮಿ.ಮೀ. ಮಳೆ ಸುರಿದಿದೆ. ಪುತ್ತೂರು ನಗರದಲ್ಲಿ ಕಡಿಮೆ ಹಾಗೂ ಶಿರಾಡಿ ಭಾಗದಲ್ಲಿ 112.4 ಮಿ.ಮೀ. ಮಳೆ ಸುರಿದಿದೆ. ಗಾಳಿ ಮಳೆಯ ಕಾರಣ ಗ್ರಾಮಾಂತರ ಭಾಗಗಳಲ್ಲಿ ಆಗಾಗ್ಗೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹಗಲು ಸಮಯದಲ್ಲೂ ಇದು ಮುಂದುವರಿದಿದೆ. ತಂತಿಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಒಂದಷ್ಟು ಹಾನಿ, ಸಂಪರ್ಕ ವ್ಯತ್ಯಯ ಉಂಟಾಗಿದೆ.