ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಲ್ಲಲ್ಲಿ ಭೂ ಕುಸಿತ ಸಂಭವಿಸಿ ಅಪಾರ ನಷ್ಟ ಸಂಭವಿಸಿದೆ.
ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ಸಂಸೆ ಗ್ರಾಪಂ ವ್ಯಾಪ್ತಿಯ ಎಡಮುರ ಗ್ರಾಮದಲ್ಲಿ ರಮಾ ಎಂಬವರ ಮನೆ ಹಿಂಬದಿಯಲ್ಲಿ ಗುಡ್ಡ ಕುಸಿದು ಅಪಾರ ನಷ್ಟ ಸಂಭವಿಸಿದೆ.
ಇದನ್ನೂ ಓದಿ:ಸ್ನೇಹಿತನ ತೋಟದಲ್ಲಿ ಸಂಚಾರಿ ವಿಜಯ್ ಅಂತ್ಯಕ್ರಿಯೆ: ಪಂಚನಹಳ್ಳಿಯಲ್ಲಿ ಸಿದ್ದತೆ
ಗುಡ್ಡ ಸೋಮವಾರ ಇಡೀ ದಿನ ಸುರಿದ ಧಾರಾಕಾರ ಮಳೆಗೆ ಶಿಥಿಲಗೊಂಡು ಗುಡ್ಡದ ಮಣ್ಣು ರಮಾ ಅವರ ಮನೆಯತ್ತ ಜಾರಿ ಬಂದಿದೆ. ಗುಡ್ಡದ ಮಣ್ಣು ಮನೆಯ ಹಿಂಬದಿಯಲ್ಲಿದ್ದ ಶೌಚಾಲಯ, ಕೃಷಿ ಉಪಕರಣಗಳು, ಧವಸ ಧಾನ್ಯ ಸಂಗ್ರಹಿಸಿದ್ದ ಕೊಠಡಿಯ ಒಳಗೆ ನುಗ್ಗಿದ್ದು, ಸುಮಾರು 1.50 ಲಕ್ಷ ರೂ. ನಷ್ಟ ಸಂಭವಿಸಿದೆ. ಸಂತ್ರಸ್ಥ ಕುಟುಂಬ ಪರಿಹಾರಕ್ಕೆ ಒತ್ತಾಯಿಸಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಮಳೆ ಗಾಳಿಗೆ ನೂರಾರು ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಮಲೆನಾಡಿಬ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.