Advertisement

ಧಾರಾಕಾರ ಮಳೆಗೆ ವಿವಿಧೆಡೆ ಹಾನಿ

02:55 AM Jun 09, 2018 | Team Udayavani |

ಮಹಾನಗರ: ಶುಕ್ರವಾರ ಸುರಿದ ಮಳೆಗೆ ಕೆಲವೆಡೆ ಹಾನಿ ಉಂಟಾಯಿತು. ಇನ್ನು ಕೆಲವೆಡೆ ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿತು.

Advertisement

ಅಂಗಡಿಗೆ ನೀರು
ಎಡಪದವು: ಚರಂಡಿಯಲ್ಲಿ ಮರಳು ತುಂಬಿಕೊಂಡ ಕಾರಣ ಮಳೆಯ ನೀರು ಅಂಗಡಿಗೆ ನುಗ್ಗಿದ ಘಟನೆ ಮಳಲಿಯ ಜೋಡುತಡಮೆ ಎಂಬಲ್ಲಿ ನಡೆಯಿತು. ಗಂಜಿಮಠದಿಂದ ಮಳಲಿಗೆ ರಸ್ತೆ ಸಂಪರ್ಕಿಸುತ್ತಿದ್ದು, ಮಳೆಯ ನೀರು ಹೋಗಲೆಂದು ಜೋಡುತಡಮೆ ಎಂಬಲ್ಲಿ ತೆರೆದ ಚರಂಡಿ ತೆರೆಯಲಾಗಿದೆ. ಆದರೆ ಗಂಜಿಮಠ ಪ್ರದೇಶದ ನಾರ್ಲ, ಸೈಟ್‌ ಭಾಗದಲ್ಲಿ ಮರಳು ಸಂಗ್ರಹಿಸಿಟ್ಟಿದ್ದು, ಇದು ಭಾರೀ ಮಳೆಗೆ ನೀರಿನೊಂದಿಗೆ ಕೊಚ್ಚಿಕೊಂಡು ಚರಂಡಿಯನ್ನು ತುಂಬಿಕೊಂಡಿದೆ. ಜೋರು ಮಳೆ ಬಂದಾಗ ಚರಂಡಿಯಲ್ಲಿ ಮರಳು ಮಿಶ್ರಿತ ನೀರು ಚರಂಡಿಯನ್ನು ಹಾದು ಜೋಡುತಡಮೆಯ ನಾರಾಯಣ, ಓಂದಾಸ್‌ ಮುಂತಾದವರ ಅಂಗಡಿಗೆ ನುಗ್ಗುವ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ ನಿಂತಾಗ ಅಂಗಡಿ ಮಾಲಕರು ಚರಂಡಿಯಿಂದ ಮರಳೆತ್ತಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುತ್ತಾರೆ. ನಿತ್ಯವೂ ಇದೇ ರೀತಿ ನಡೆಯುತ್ತಿರುವುದರಿಂದ ಇಲ್ಲಿನವರು ಸಮಸ್ಯೆ ಎದರುಸುತ್ತಿದ್ದು, ಈ ಬಗ್ಗೆ ಪಂಚಾಯತ್‌ ನವರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮರ ಬಿದ್ದು ವಿದ್ಯುತ್‌ ವ್ಯತ್ಯಯ
ಪೊಳಲಿ: ಬೃಹತ್‌ ಗಾತ್ರದ ಮರವೊಂದು ಉರುಳಿಬಿದ್ದು ವಿದ್ಯುತ್‌ ವ್ಯತ್ಯಯಗೊಂಡಿದ್ದಷ್ಟೇ ಅಲ್ಲದೆ ಸಂಚಾರಕ್ಕೆ ಅಡ್ಡಿಯಾದ ಘಟನೆ ಬಿ.ಸಿ.ರೋಡ್‌ ಮತ್ತು ಪೊಳಲಿ ಮಧ್ಯೆ ಇರುವ ಕಲ್ಲಗುಡ್ಡೆ ಡೊಮಿನಿಕ್‌ ಶಾಲೆಯ ಎದುರು ಸಂಭವಿಸಿದೆ. ಜೂನ್‌ 7ರ ರಾತ್ರಿ ಉಂಟಾದ ಭಾರೀ ಮಳೆಯಿಂದಾಗಿ ಮರ ಉರುಳಿ ಬಿದ್ದಿದ್ದು, ಇದರಿಂದಾಗಿ ವಿದ್ಯುತ್‌ ಕಂಬಗಳಿಗೆ ಹಾನಿಯುಂಟಾಗಿ ಪರಿಸರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ವಾಹನ ಸಂಚಾರಕ್ಕೂ ನಿನ್ನೆ ಬೆಳಗ್ಗಿನವರೆಗೆ ಅಡಚಣೆ ಉಂಟಾಗಿತ್ತು. ಬಳಿಕ ಮೆಸ್ಕಾಂ ಸಿಬಂದಿ ಹಾಗೂ ಸ್ಥಳೀಯರು ಕ್ರೇನ್‌ ಸಹಾಯದಿಂದ ಉರುಳಿಬಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಬಿ.ಸಿ.ರೋಡ್‌ ಪೊಳಲಿ ಮಧ್ಯೆ ಮತ್ತೆ ವಾಹನ ಸಂಚಾರ ಪುನರಾರಂಭಗೊಂಡಿತು.


ಮಳೆಯಿಂದ ಆವರಣ ಗೋಡೆ ಕುಸಿತ
ಹಳೆಯಂಗಡಿ:
ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಂದಿರಾ ನಗರದ ವಸತಿ ಪ್ರದೇಶದಲ್ಲಿನ ಮನೆಯೊಂದರ ಆವರಣ ಗೋಡೆಯೊಂದು ಧಾರಾಕಾರ ಮಳೆಯಿಂದ ಪಕ್ಕದ ಮನೆಯ ಗೋಡೆಯ ಮೇಲೆ ಬಿದ್ದು ಹಾನಿಯಾಗಿದೆ. ಹಳೆಯಂಗಡಿ ರಿಕ್ಷಾ ಚಾಲಕರಾಗಿರುವ ಉಸ್ಮಾನ್‌ ಅವರ ಮನೆಯ ಆವರಣ ಗೋಡೆಯು ಅವರ ನೆರೆಮನೆಯ ಅಬ್ದುಲ್‌ ಹಮೀದ್‌ ಅವರ ಮನೆಯ ಗೋಡೆಯ ಮೇಲೆ ಬಿದ್ದಿರುವುದರಿಂದ ಗೋಡೆಗೂ ಸಹ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಕರಣಿಕರಾದ ಮೋಹನ್‌ ಅವರು ಭೇಟಿ ನೀಡಿ ನಷ್ಟದ ಬಗ್ಗೆ ವರದಿಯನ್ನು ತಹಶೀಲ್ದಾರ್‌ ಗೆ ಸಲ್ಲಿಸಿದ್ದಾರೆ. ಹಳೆಯಂಗಡಿ ಗ್ರಾ.ಪಂ.ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್‌.ವಸಂತ ಬೆರ್ನಾಡ್‌, ಅಬ್ದುಲ್‌ ಖಾದರ್‌, ಚಿತ್ರಾ ಸುರೇಶ್‌, ಅಬ್ದುಲ್‌ ಅಜೀಜ್‌ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.

ಗುಡ್ಡ ಜರಿದು ಮನೆಗೆ ಹಾನಿ
ಕೆಂಜಾರು:
ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಂಜಾರು ಗುಡ್ಡೆ ಮನೆಯ ಬಳಿ ಮಳೆಗೆ ಗುಡ್ಡ ಜರಿದು ಮೀನಾಕ್ಷಿ ಪೂಜಾರಿ ಎಂಬವರ ಮನೆಗೆ ಹಾನಿಯಾಗಿದೆ. ಗುರುವಾರ ರಾತ್ರಿಯಿಂದ ಕೆಂಜಾರು ಪ್ರದೇಶದಲ್ಲಿ ಜಡಿಮಳೆ ಬರುತ್ತಿದ್ದ ಕಾರಣ ಶುಕ್ರವಾರ ಮುಂಜಾನೆ 4ರ ವೇಳೆ ಗುಡ್ಡ ಜರಿದು ಬಿದ್ದಿದ್ದು, ಮನೆ ಭಾಗಶಃ ಹಾನಿಯಾಗಿದೆ. ಒಂದು ಗೋಡೆ ಸಂಪೂರ್ಣ ಕುಸಿದು ಬಿದ್ದು ಮನೆಯ ಛಾವಣಿಗೂ ಹಾನಿಯಾಗಿದೆ. ಈ ಸಮಯದಲ್ಲಿ ಮೀನಾಕ್ಷಿ ಅವರು ಪಕ್ಕದ ಕೊಠಡಿಯಲ್ಲಿ ಮಲಗಿದ್ದರು.ಮೀನಾಕ್ಷಿ ಅವರ ಗಂಡ 6 ವರ್ಷಗಳ ಹಿಂದೆ ನಿಧನ ಹೊಂದಿದ್ದಾರೆ. ಅವರು ಪುತ್ರನೊಂದಿಗೆ ವಾಸವಾಗಿದ್ದಾರೆ. ಗ್ರಾಮ ಕರಣಿಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸುಮಾರು 2ಲಕ್ಷ ರೂ. ನಷ್ಟ ಸಂಭವಿಸಿದೆ.

Advertisement


ಧಾರಾಕಾರ ಮಳೆಗೆ ತೊಯ್ದು ತೊಪ್ಪಡಿಯಾದ ವಾರದ ಸಂತೆ
ಮೂಡಬಿದಿರೆ:
ಶುಕ್ರವಾರ ಮೂಡಬಿದಿರೆಯ ವಾರದ ಸಂತೆಯ ದಿನ. ಆದರೆ ಒಮ್ಮೆಲೇ ಸುರಿದ ಮಳೆಗೆ ತರಕಾರಿ ಅದು ಇದು ಎಲ್ಲವೂ ಮಳೆನೀರಿನಲ್ಲಿ ತೊಯ್ದು ತೊಪ್ಪಡಿಯಾಗಿ ಬಿಟ್ಟಿತು. ಅಂಗಡಿಯ ವ್ಯವಸ್ಥೆ ಇರುವವರೂ ಈ ಬಿರುಸಾದ ಮಳೆಯಿಂದ ಕಿರಿಕಿರಿ ಅನುಭವಿಸಿದರು. 

ಸುಮಾರು ಮೂರಡಿ ಕೆಳಕ್ಕೆ ಕುಸಿತ
ಮೂಲ್ಕಿ:
ಮೂಲ್ಕಿ ಪಂಚಮಹಾಲ್‌ ಬಳಿಯ ಮನೆಯೊಂದರ ಆವರಣ ಗೋಡೆ ಬಿದ್ದು ಭೂಮಿ ಸುಮಾರು ಮೂರಡಿ ಕೆಳಕ್ಕೆ ಕುಸಿದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್‌ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶುಭಲಕ್ಷಿ ಕಾಮತ್‌ ಎಂಬವರಿಗೆ ಸೇರಿದ ಈ ಮನೆಯ ಆವರಣದೊಳಗೆ ಹೆದ್ದಾರಿಯ ಕಾಮಗಾರಿಯಲ್ಲಿ ಉಂಟಾಗಿರುವ ಆವಾಂತರದಿಂದ ಮಳೆ ನೀರು ತುಂಬಿಕೊಂಡು ಈ ರೀತಿಯ ಅನಾಹುತ ಉಂಟಾಗಿತ್ತು. ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ, ಮುಖ್ಯಾಧಿಕಾರಿ ಇಂದು ಎಂ., ಇಂಜಿನಿಯರ್‌ ಅಶ್ವಿ‌ನಿ, ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್‌ ಕುಮಾರ್‌, ವಿಠ್ಠಲ ಎನ್‌.ಎಂ., ಸತ್ಯೇಂದ್ರ ಶೆಣೈ, ಹರ್ಷರಾಜ್‌ ಶೆಟ್ಟಿ, ಉಮೇಶ್‌ ಮಾನಂಪಾಡಿ, ರವೀಂದ್ರ ಶೆಟ್ಟಿ, ರಂಗನಾಥ ಶೆಟ್ಟಿ, ವಿನೋದ್‌ ಸಾಲ್ಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next