Advertisement
ಕೊಳೆರೋಗದ ಭೀತಿಕರಾವಳಿಯಲ್ಲಿ ಭತ್ತದ ಕೃಷಿ ಹಾಗೂ ಅಡಿಕೆ ಪ್ರಮುಖ ಬೆಳೆಯಾಗಿದೆ. ಮಳೆ ಆರಂಭವಾದ ಬಳಿಕ ಒಂದು ದಿನವೂ ಬಿಡುವು ಕೊಡದೆ ಮಳೆ ಸುರಿಯುತ್ತಿರುವುದರಿಂದ ಅಡಿಕೆಗೆ ಪ್ರಥಮ ಹಂತದ ಔಷಧಿ ಸಿಂಪರಣೆಗೂ ಅವಕಾಶ ಸಿಕ್ಕಿಲ್ಲ. ಈ ಪರಿಣಾಮ ನೆರೆ ನೀರು ನಿಲ್ಲದ ತೋಟಗಳಿಗೂ ಕೊಳೆರೋಗದ ಭೀತಿ ಎದುರಾಗಿದೆ. ಅಡಿಕೆ ಕೃಷಿಗೆ ಪ್ರತೀ 30ರಿಂದ 45 ದಿನಗಳಿಗೊಮ್ಮೆ ಔಷಧಿ ಸಿಂಪರಣೆ ಮಾಡಬೇಕಾಗುತ್ತದೆ. ಆದರೆ ನಿರಂತರ ಮಳೆಯ ಕಾರಣ ಜೂನ್ ತಿಂಗಳ ಪ್ರಥಮ ಹಂತದ ಔಷಧಿ ಸಿಂಪರಣೆಯು ಇನ್ನೂ ಮಾಡಲಾಗಿಲ್ಲ. ಕರಾವಳಿ ಭಾಗದ ಕೃಷಿಕರು ಅಡಿಕೆ ಬೆಳೆಯೊಂದಿಗೆ ಉಪ ಕೃಷಿಗಳಾದ ಕರಿಮೆಣಸು, ಬಾಳೆ ಗಿಡಗಳ ಉಳಿವಿಗಾಗಿ ಶತಪ್ರಯತ್ನದಲ್ಲಿದ್ದಾರೆ. ನದಿ ಪಾತ್ರದಲ್ಲಿರುವ ಗದ್ದೆಗಳಿಗೆ ನೆರೆ ನೀರು ಆವರಿಸಿ ತಿಂಗಳಾಗುತ್ತ ಬಂದಿರುವ ಕಾರಣ ಭತ್ತ ನಾಟಿಯನ್ನೂ ಮಾಡಲಾಗುತ್ತಿಲ್ಲ.
ಆರಂಭದಲ್ಲಿ ಬಿರುಗಾಳಿ, ಸಿಡಿಲಿನೊಂದಿಗೆ ಮುಂಗಾರು ಪ್ರವೇಶ ಪಡೆದು ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ರೈತರ ಅಪಾರ ಪ್ರಮಾಣದ ಅಡಿಕೆ, ಬಾಳೆ, ತೆಂಗು ಕೃಷಿಯನ್ನು ನಾಶ ಮಾಡಿತ್ತು. ಜತೆಗೆ ಸಿಡಿಲಿಗೆ ರೈತರ ಜೀವ ಬಲಿಯನ್ನು ಪಡೆದುಕೊಂಡಿತ್ತು. ಇದೀಗ ಭಾರೀ ಪ್ರಮಾಣದ ಮಳೆ ಅಳಿದುಳಿದ ಕೃಷಿಯನ್ನು ನಾಶ ಮಾಡುವತ್ತ ಪಣತೊಟ್ಟಂತಿದೆ. ಮಳೆ ಆರಂಭದಿಂದ ಈವರೆಗೆ ತೋಟಗಳಿಗೆ ಸಮರ್ಪಕ ರಸಗೊಬ್ಬರವನ್ನು ಹಾಕಲು ಮಳೆ ಅವಕಾಶ ನೀಡಿಲ್ಲ. ಗುಡ್ಡಗಾಡು ಬಯಲು ಪ್ರದೇಶದ ತೋಟಗಳಲ್ಲಿ ಮಳೆ ನೀರಿಗೆ ಗೊಬ್ಬರ ಕೊಚ್ಚಿ ಹೋಗುವ ಭೀತಿ ಉಂಟಾಗಿದೆ. ಇದರಿಂದ ದುಬಾರಿ ವೆಚ್ಚದ ರಸಗೊಬ್ಬರಗಳು ನೀರು ಪಾಲಾಗುತ್ತಿವೆ. ಕೂಲಿ ಕಾರ್ಮಿಕರ ಕೊರತೆ
ಔಷಧಿ ಸಿಂಪರಣೆಯ ಕೂಲಿ ಕಾರ್ಮಿಕರು ಗ್ರಾಮದಲ್ಲಿ ಬೆರಳೆಣಿಕೆಯಷ್ಟಿರುವ ಕಾರಣ ಸಿಂಪರಣೆ ಮಾಡುವ ಕೂಲಿ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆಯಾಗಿದೆ. ಕಳೆದ ವರ್ಷ 1,200 ರೂ. ದಿನ ಸಂಬಳವಿತ್ತು. ಆದರೆ ಈ ವರ್ಷ 1,500 ರೂ.ಗೂ ಅಧಿಕ ಸಂಬಳ ನೀಡಿದರೂ ಕೂಲಿ ಕಾರ್ಮಿಕರ ಕೊರತೆಯಾಗಿದೆ. ಇದ್ದವರಿಗೂ ಮಳೆ ಕಾರಣ ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಈ ಕಾರಣಕ್ಕಾಗಿ ಡ್ರಂ ಔಷಧಿ ಸಿಂಪಡಣೆಯ ಆಧಾರದಲ್ಲಿ ಸಂಬಳ ನೀಡುವ ಪದ್ಧತಿ ಜಾರಿಗೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಒಂದು ಡ್ರಂಗೆ 600 ರೂ. ವೇತನ ನೀಡಲಾಗುತ್ತಿದೆ.
Related Articles
ಕರಾವಳಿ ಭಾಗದಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯ ರೈತರಿಗೆ ಸರಕಾರ ಸಾಲ ಮನ್ನಾದ ಬದಲು ಅಡಿಕೆಗೆ ಬೆಂಬಲ ಬೆಲೆ ಘೋಷಿಸುತ್ತಿದ್ದರೆ ಸಾವಿರಾರು ರೈತರು ಸಂಕಷ್ಟದಿಂದ ಪಾರಾಗುತ್ತಿದ್ದರು. ಜನಪ್ರತಿನಿಧಿಗಳು ನೆರೆ ನೀರಿನಿಂದ ಕೃಷಿಯನ್ನು ಕಳೆದುಕೊಂಡ ರೈತರ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಂಡು ಸದನದಲ್ಲಿ ಸರಕಾರದ ಮುಂದಿಟ್ಟು ಕರಾವಳಿಯ ರೈತರಿಗೆ ನ್ಯಾಯ ದೊರಕಿಸಕೊಡಬೇಕಾಗಿದೆ. ಅಡಿಕೆಗೆ ಸರಕಾರ ಬೆಂಬಲ ಬೆಲೆ ಘೋಷಿಸುವಂತೆ ಒತ್ತಡ ಹೇರಬೇಕಾಗಿದೆ.
Advertisement