Advertisement
ಬೈಂದೂರು-ಶಿರೂರು ಭಾಗದಲ್ಲಿ ಸೋಮ ವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗಿನ ವರೆಗೆ ಸತತ ಸುರಿದ ಮಳೆಯಿಂದಾಗಿ 10 ಕೋ.ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಅನೇಕ ಮನೆ, ದೋಣಿಗಳಿಗೆ ಹಾನಿಯಾಗಿದ್ದು, ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಪಶ್ಚಿಮ ಘಟ್ಟದ ತಪ್ಪಲಿನ ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಯಿಂದ ಜಲಸ್ಫೋಟದಂತೆ ತೋಡು, ಹೊಳೆ, ನದಿಗಳು ಉಕ್ಕಿಹರಿದಿದ್ದು, ಬೃಹತ್ ಮರಗಳು ಉರುಳಿ ತೇಲಿಬಂದು ರಸ್ತೆ, ಸೇತುವೆಗಳು ನಾಶವಾಗಿವೆ. ಎರಡು ಅಂಗಡಿಗಳು ಕುರುಹೇ ಇಲ್ಲದಂತೆ ನೀರು ಪಾಲಾಗಿವೆ. ಈ ಭಾಗದಲ್ಲಿ 3 ಮನೆಗಳು ಸಂಪೂರ್ಣ ನಾಶ, 30ರಷ್ಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ರೆಡ್ ಅಲರ್ಟ್
ರಾಜ್ಯಾದ್ಯಂತ ಮುಂದಿನ 4ರಿಂದ 5 ದಿನಗಳ ವರೆಗೆ ಭರ್ಜರಿ ಮಳೆಯಾಗಲಿದೆ. ಆ. 3ರಿಂದ 4 ದಿನ ಕರಾವಳಿ ಜಿಲ್ಲೆಗಳು ಹಾಗೂ ಆ. 4ರಿಂದ 3 ದಿನ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.
Related Articles
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಅಸು ನೀಗಿ ದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿ ನಾಲ್ವರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾಧಿ ಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾ ಚರಣೆಯ ನೇತೃತ್ವ ವಹಿಸಿದ್ದರು.
Advertisement
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಗೆ ಯುವಕ ನೀರು ಪಾಲಾಗಿದ್ದಾನೆ. ಕುಣಿಗಲ್ ನಗರದ ರೈಲ್ವೇ ಅಂಡರ್ ಪಾಸ್ ಬಳಿ ಚಲಿಸುತ್ತಿದ್ದ ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕಾರು ಚಾಲಕ ರಮೇಶ್ ಪಾರಾಗಿದ್ದಾರೆ. ಶಿರಾ ತಾಲೂಕಿನ ದಾವೂದ್ ಪಾಳ್ಯ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿರುವ ವೇಳೆ ದ್ವಿಚಕ್ರ ವಾಹನ ಸಹಿತ ಕೊಚ್ಚಿಕೊಂಡು ಹೋಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೊಡಲಕುಪ್ಪೆ ಗ್ರಾಮದ ಬಳಿ ನಾಲೆಯಲ್ಲಿ ವೃದ್ಧೆಯೊಬ್ಬರ ಶವ ತೇಲಿ ಬಂದಿದೆ. ಕೋಲಾರ ಜಿಲ್ಲೆಯಲ್ಲಿ ಕೂಡ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಹರಿದಿವೆ ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಾಲ್ಕು ದಿನಗಳಿಂದ ಬಿರುಸಿನಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಬೆಳೆ ನಾಶವಾಗಿದೆ. ಹುಣಸೂರಿನಲ್ಲಿ ಮಹಿಳೆಯೊಬ್ಬರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಚಿಂಚೋಳಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.
ಗಣಿನಾಡು ಬಳ್ಳಾರಿ – ವಿಜಯನಗರ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಹೊಸಪೇಟೆಯ ಜಿ.ನಾಗಲಾಪುರ ಗ್ರಾಮದಲ್ಲಿ ತುಂಬಿ ಹರಿದ ಹಳ್ಳದಲ್ಲಿ ರೈತ ಕೊಚ್ಚಿ ಹೋಗಿ ದ್ದಾನೆ.
ಭಾರೀ ಮಳೆಗೆ ಕಾರಣವೇನು?ಛತ್ತೀಸ್‌ಗಢದಿಂದ ದಕ್ಷಿಣಕ್ಕೆ ಮೇಲ್ಮೈ ಸುಳಿಗಾಳಿ ಇರುವುದು, ತಮಿಳುನಾಡಿನಿಂದ ಬಂಗಾಲಕೊಲ್ಲಿ ಕಡೆಗೆ ಆಂಧ್ರ ಕರಾವಳಿಯ ಮೂಲಕ ಮೇಲ್ಮೈ ಸುಳಿಗಾಳಿ ಬೀಸುತ್ತಿರುವುದು ಮತ್ತು ದಕ್ಷಿಣ ದ್ವೀಪದಲ್ಲಿ ಪೂರ್ವ ಮತ್ತು ಪಶ್ಚಿಮ ಎರಡೂ ದಿಕ್ಕುಗಳಲ್ಲಿ ಗಾಳಿ ಬೀಸುತ್ತಿರುವ ಕಾರಣ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪರಿಹಾರ ಕಾರ್ಯದಲ್ಲಿ ವಿಳಂಬ ಸಲ್ಲದು: ಸಿಎಂ ಸೂಚನೆ
ಮಳೆಯಿಂದ ಹಾನಿಗೀಡಾದ 11 ಜಿಲ್ಲೆಗಳ ಡಿ.ಸಿ.ಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು. ತುರ್ತು ಪರಿಹಾರ ಮತ್ತು ರಕ್ಷಣ ಕಾರ್ಯಾಚರಣೆಗಳಲ್ಲಿ ವಿಳಂಬವಾಗಬಾರದು ಎಂದು ಅವರು ಆದೇಶ ನೀಡಿದ್ದಾರೆ. ಮೈಸೂರು, ದಾವಣಗೆರೆ ಹಾಗೂ ಉಡುಪಿ ಜಿಲ್ಲೆಗಳಿಗೆ ಅಗತ್ಯ ಇರುವ ಹೆಚ್ಚುವರಿ ಅನುದಾನ ನೀಡಬೇಕು. ಕಾಳಜಿ ಕೇಂದ್ರಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳು ಇರುವ ಬಗ್ಗೆ ತಹಸೀಲ್ದಾರ್‌ಗಳು ಖಚಿತಪಡಿಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.