Advertisement

Heavy Rain: ಬೆಳ್ತಂಗಡಿ-ಮೂಡುಬಿದಿರೆ ಮತ್ತೆ ನೆರೆ ಭೀತಿ

02:44 AM Aug 01, 2024 | Team Udayavani |

ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಬುಧವಾರ ಸಂಜೆಯಿಂದ ತಡರಾತ್ರಿ ವರೆಗೆ ಭಾರೀ ಮಳೆ ಸುರಿದಿದ್ದು, ಮತ್ತೆ ನೆರೆ ಭೀತಿ ಎದುರಾಗಿದೆ. ಸವಣಾಲು ಗ್ರಾಮದ ನಡ್ತಿಕಲ್ಲಿನಲ್ಲಿ ರವಿಚಂದ್ರ ಅವರ ಮಾಲಕತ್ವದ ಗುಡ್ಡ ವಸಂತ ಅವರ ಮನೆ ಪಕ್ಕ ಕುಸಿದು ಬಿದ್ದಿದ್ದು ಮನೆಯವರ ಸ್ಥಳಾಂತರಿಸಲಾಗಿದೆ.

Advertisement

ಗುರುವಾಯನಕೆರೆಯಲ್ಲಿ ಇತ್ತೀಚೆಗಷ್ಟೆ ನವೀಕರಣಗೊಳಿಸಿದ ಹಝರತ್‌ ಶೈಖ್‌ ಹಯಾತುಲ್‌ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್‌ನ ಮುಂಭಾಗ ಭಾರೀ ಮಣ್ಣು ಕುಸಿದು ಅಪಾಯ ಎದುರಾಗಿದೆ. ಗುರುವಾಯನಕೆರೆ ರಸ್ತೆಯಲ್ಲಿ ರಾತ್ರಿ ನೆರೆ ನೀರು ತುಂಬಿತ್ತು. ಬೆಳ್ತಂಗಡಿ ಚರ್ಚ್‌ ರಸ್ತೆ ಒಳಭಾಗದಲ್ಲಿ ರೆನಿಲ್ಡಾ ಜೋಯಿಸ್‌ ಮನೆಗೆ ಪಕ್ಕದ ಬರೆ ಕುಸಿದಿದೆ. ಕುತ್ಲೂರು-ಅತ್ರಿಜಾಲು ಸಂಪರ್ಕಿಸುವ ರಸ್ತೆ ಮಧ್ಯ ಭಾಗ ಬಿರುಕು ಬಿಟ್ಟಿದ್ದು ಸಂಚಾರ ಕಡಿತಗೊಂಡಿದೆ.

ಮೂಡುಬಿದಿರೆ: ಮುಳುಗಿದ 2 ಸೇತುವೆಗಳು
ಮೂಡುಬಿದಿರೆ: ಭಾರೀ ಮಳೆಯಿಂದಾಗಿ ಮೂಡುಬಿದಿರೆ ತಾಲೂಕಿನಾದ್ಯಂತ ನೆರೆ ಸ್ಥಿತಿ ಕಂಡು ಬಂದಿದೆ. ಪಣಪಿಲ ಗ್ರಾಮದ ಆಯರೆಗುಡ್ಡೆ ಮತ್ತು ಬೋರುಗುಡ್ಡೆ ಸಂಪರ್ಕಿಸುವ ಬಿರ್ಮೆರೆಬೈಲು ಸೇತುವೆ ಹಾಗೂ ಶಿರ್ತಾಡಿ-ಮರೋಡಿ ಸಂಪರ್ಕದ ದೋಣಿಬಾಗಿಲು ರಸ್ತೆ ನೀರಿನಲ್ಲಿ ಮುಳುಗಿವೆ. ರಾತ್ರಿ ವೇಳೆ ಮತ್ತೆ ಭಾರೀ ಮಳೆ ಸುರಿದು ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ.

ದೇವರಗುಂಡ: ರಸ್ತೆಗೆ ಬಿದ್ದ ಮರ

Advertisement

ಸುಳ್ಯ: ಸುಳ್ಯ – ಕಾಸರಗೋಡು ರಸ್ತೆಯ ದೇವರಗುಂಡದಲ್ಲಿ ಬುಧವಾರ ಸಂಜೆ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಘಟನೆಯಿಂದ ಸ್ವಲ್ಪ ಹೊತ್ತು ಸಂಚಾರ ಸ್ಥಗಿತಗೊಂಡಿತು. ಬಳಿಕ ಮರವನ್ನು ತೆರವು ಮಾಡಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.

ಸುಳ್ಯ-ಪಾನತ್ತೂರು ಅಂತರ್‌ರಾಜ್ಯ ಹೆದ್ದಾರಿಯ ಕಲ್ಲಪಳ್ಳಿ ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದು ಸಂಚಾರಕ್ಕೆ ತಡೆ ಉಂಟಾಗಿತ್ತು, ಬಳಿಕ ಸ್ಥಳೀಯರ ಸಹಕಾರದಲ್ಲಿ ಮಣ್ಣು ತೆರವು ಮಾಡಿ ಸಂಚಾರ ಮುಕ್ತ ಮಾಡಲಾಯಿತು. ಈ ರಸ್ತೆಯ ಹಲವೆಡೆ ಮಣ್ಣು ಕುಸಿತದ ಭೀತಿ ಇದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next