ಬೆಂಗಳೂರು: ಬಳ್ಳಾರಿ, ಚಿತ್ರದುರ್ಗ, ರಾಯಚೂರು ಸೇರಿ ಹೈದ್ರಾಬಾದ್ ಹಾಗೂ ಮಧ್ಯ ಕರ್ನಾಟಕದಲ್ಲಿ ಉತ್ತಮ ಮಳೆಯಾ
ಗುತ್ತಿದೆ. ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಚಿತ್ರದುರ್ಗದಲ್ಲಿ ರಾಜ್ಯದಲ್ಲಿಯೇ ಅಧಿಕ,
11 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.
ಬಳ್ಳಾರಿ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗಿದ್ದು, ಆಂಧ್ರಪ್ರದೇಶ ಗಡಿಭಾಗದ ಚಿಂತಕುಂಟ ಗ್ರಾಮದ ಬಳಿ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಕೊಪ್ಪಳ-ಬಳ್ಳಾರಿ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗುರುವಾರ ಸಿಲುಕಿ ಹಾಕಿಕೊಂಡಿತ್ತು. ನೀರಿನ ರಭಸ ಹೆಚ್ಚಾದ ಕಾರಣ ಚಾಲಕ ಬಸ್ಸನ್ನು ಸೇತುವೆ ಮಧ್ಯದಲ್ಲಿಯೇ ನಿಲ್ಲಿಸಿದ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಬಸ್‌ನಲ್ಲಿದ್ದ 50ಕ್ಕೂ ಅ ಧಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ದಡಕ್ಕೆ ಕರೆ ತಂದರು. ಈ ಮಧ್ಯೆ, ತಾಲೂಕಿನ ಸಿಂಧುವಾಳ ಗ್ರಾಮದ ರೈತ ಶ್ರೀನಿವಾಸ ಎಂಬುವರು ಜಮೀನಿನಲ್ಲಿ ಅಳವಡಿಸಿದ್ದ ಪಂಪ್‌ಸೆಟ್ ಕೊಚ್ಚಿ ಹೋಗಬಹುದೆಂಬ ಆತಂಕದಲ್ಲಿ ಜಮೀನಿಗೆ ಆಗಮಿಸಿದ್ದರು.
ದಾರಿಮಧ್ಯೆ, ಹಳ್ಳದಲ್ಲಿ ನೀರು ಹೆಚ್ಚಾಗಿ ಸಿಲುಕಿಕೊಂಡರು. ನೆರೆ ಹೆಚ್ಚಾಗುತ್ತಿದ್ದಂತೆ ರಕ್ಷಣೆಗಾಗಿ ಸಮೀಪದಲ್ಲಿದ್ದ ಮರ ಏರಿ ಕುಳಿತಿದ್ದು, ಅವರನ್ನು ರಕ್ಷಿಸಲು ತುಂಗಭದ್ರಾ ಜಲಾಶಯದಿಂದ ಎಲೆಕ್ಟ್ರಿಕಲ್ ಬೋಟ್ ತರಿಸಲಾಗಿದೆ. ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಜ್ಞಾನಸಾಗರ ಆವರಣದಲ್ಲಿ ಅಪಾರ ಪ್ರಮಾಣದ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಹೊಸಪೇಟೆ ತಾಲೂಕಿನ ಬೈಲುವದ್ದಿ ಗೇರಿಯಲ್ಲಿ ಬುಧವಾರ ಸಂಜೆ ಐದು ಕ್ವಿಂಟಾಲ್ ಉಳ್ಳಾಗಡ್ಡೆ ಸಂಗ್ರಹಿಸಿಟ್ಟಿದ್ದ ಗುಡಿಸಲು ಸಿಡಿಲಿನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ರಾಯಚೂರು, ಚಿತ್ರದುರ್ಗ ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಡೀ ಸುರಿದ ಮಳೆಗೆ 83ಕ್ಕೂ ಹೆಚ್ಚು ಮನೆಗಳು ಕುಸಿದಿವೆ.
ಜಿಲ್ಲೆಯಾದ್ಯಂತ ಮಳೆಯಿಂದಾಗಿ 2 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ. ಇನ್ನೆರಡು ದಿನ ರಾಜ್ಯದ ಕರಾ ವಳಿಯ ಹಲವೆಡೆ, ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.