ಬಂಟ್ವಾಳ: ತಾಲೂಕಿನಲ್ಲಿ ಮಳೆಯ ರಭಸಕ್ಕೆ ಮಂಗಳವಾರ ರಾತ್ರಿಯಿಂದೀಚೆಗೆ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಒಂದು ಅಡಿಕೆ -ತೆಂಗಿನ ತೋಟದಲ್ಲಿ ಮರಬಿದ್ದು ಹಾನಿ ಸಂಭವಿಸಿದೆ.
ಕುಳ ಗ್ರಾಮದ ಕಾಂಜಗುಳಿ ನಿವಾಸಿ ವಿಶ್ವನಾಥ ಅವರ ಕಚ್ಚಾ ಮನೆಗೆ ಹಾನಿಯಾಗಿದ್ದು, ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ. ಪೆರ್ನೆ ಗ್ರಾಮದ ಗಿರಿಯಪ್ಪ ಪೂಜಾರಿ ಮನೆಗೆ ಗುಡ್ಡ ಜರಿದು ಹಾನಿಯಾಗಿದೆ. ಪೈಪ್‌ಲೈನ್ ಒಡೆದಿದೆ. ಸುಮಾರು 30 ಸಾವಿರ ರೂ. ನಷ್ಟ ಉಂಟಾಗಿದೆ
ಬಡಗಬೆಳ್ಳೂರು ನಿವಾಸಿ ಅಪೋಲಿನ್ ಪಿಂಟೋ, ನೆಟ್ಲ ಮುಟ್ನೂರು ಗ್ರಾಮದ ಅಬ್ದುಲ್ ಮಜೀದ್, ಚೇಳೂರು ಗ್ರಾಮದ ಶಾಂತಿ ಪಿಂಟೋ, ವಿಟ್ಲಪಟ್ನೂರು ಗ್ರಾಮದ ಕೃಷ್ಣಪ್ಪ ಗೌಡ ಮನೆಯು ಭಾಗಶಃ ಕುಸಿತಕ್ಕೆ ಒಳಗಾಗಿದೆ.
ಮಂಚಿ ಗ್ರಾಮದ ಕಯ್ಯೂರು ನಿವಾಸಿ ಈಶ್ವರ ಮೂಲ್ಯ ಅವರ ಮನೆ, ಶೌಚಾಲಯ ಭಾಗಶಃ ಕುಸಿತಕ್ಕೆ ಒಳಗಾಗಿದ್ದು, ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ದೂರು ನೀಡಲಾಗಿದೆ.ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಉಳಿ ಗ್ರಾಮದ ಮುದಲಾಡಿ ನಿವಾಸಿ ಲಿಂಗಪ್ಪ ಪೂಜಾರಿ ಅವರ ತೋಟದ ತೆಂಗು ಮತ್ತು ಅಡಿಕೆ ಮರಗಳಿಗೆ ಹಾನಿಯಾಗಿದ್ದು, ಕಂದಾಯ ಅಧಿಕಾರಿಗಳಿಗೆ ಪರಿಹಾರ ಕೋರಿ ಮನವಿ ಸಲ್ಲಿಸಿದ್ದಾರೆ.