ಯಲಬುರ್ಗಾ : ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಗೆ ತಾಲೂಕಿನ ಬಂಡಿಹಾಳದ ಹಿರೇಹಳ್ಳ ಸಂಪೂರ್ಣ ತುಂಬಿ ಹರಿದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಸಂಜೆ ಆದರೂ ಹಳ್ಳದ ರಭಸ ಕಡಿಮೆಯಾಗದ ಹಿನ್ನಲೆಯಲ್ಲಿ ಜನತೆ ಹಗ್ಗ ಕಟ್ಟಿಕೊಂಡು ಜೀವ ಅಂಗೈಯಲ್ಲಿ ಹಿಡಿದುಕೊಂಡು ದಡ ಸೇರಿದ ಘಟನೆ ನಡೆದಿದೆ.
ತಾಲೂಕಿನ ಬಂಡಿಹಾಳ, ತೊಂಡಿಹಾಳ, ಚಿಕೇನಕೊಪ್ಪ, ಸಂಗನಾಳ ರೈತರ ಜಮೀನುಗಳು ಈ ಹಳ್ಳದ ಹತ್ತಿರ ಬರುತ್ತವೆ. ಮುಂಗಾರು ಹಂಗಾಮಿನ ಹೆಸರು ಕಾಯಿ ಬಿಡಿಸಲು ಹಾಗೂ ಉಳ್ಳಾಗಡ್ಡಿ ಕಳೆ ಕಸ ತೆಗೆಯಲು ನೂರಾರು ರೈತರು, ರೈತ ಮಹಿಳೆಯರು, ಯುವಕರು ಕೃಷಿ ಕಾರ್ಯಕ್ಕೆ ಜಮೀನುಗಳಿಗೆ ತೆರಳಿದ್ದರು.
ಮಧ್ಯಾಹ್ನ ಏಕಾಏಕಿ ಸುರಿದ ಮಳೆಗೆ ಹಳ್ಳ ರಭಸವಾಗಿ ಹರಿದಿದೆ. ಹಳ್ಳ ದಾಟಿ ಜಮೀನುಗಳಿಗೆ ಹೋದ ವಾಹನ, ಬಂಡಿಗಳು ಅಲ್ಲಿಯೇ ಉಳಿದಿವೆ. ರಸ್ತೆಗೆ ಬ್ರಿಡ್ಜ ಕಂ ಬ್ಯಾರೇಜ್ ಅತಿ ಅವಶ್ಯಕತೆ ಇದೆ ಶೀಘ್ರದಲ್ಲೇ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದರು.
ಸಾಹಸ : ಜನರು ನಡು ಮಟ್ಟದಲ್ಲಿ ಹರಿಯುವ ನೀರಿನಲ್ಲಿ ಧೈರ್ಯವಾಗಿ ಹಗ್ಗ ಕಟ್ಟಿಕೊಂಡು ಹಳ್ಳ ದಾಟಿದ್ದು ದೊಡ್ಡ ಸಾಹಸವೇ ಆಗಿದೆ.
ಎಲ್ಲರೂ ಸುರಕ್ಷಿತವಾಗಿ ದಡ ಸೇರಿದ್ದೇವೆ. ಆದರೇ ಬೆಳೆದ ಬೆಳಗಳು ಹಾನಿಯಾಗಿವೆ ಎಂದು ರೈತರಾದ ಮಲ್ಲೇಶಪ್ಪ ಬಂಡ್ರಿ, ಶರಣಪ್ಪ ಕಳಸಪ್ಪನವರ, ಮುತ್ತು ಸಂಗಣ್ಣನವರ, ಗಾಳೆಪ್ಪ ತಮ್ಮ ವೇದನೆ ವ್ಯಕ್ತಪಡಿಸಿದ್ದಾರೆ.