ಉಡುಪಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ. ನಗರದಲ್ಲಿ ಕಲ್ಸಂಕ, ಬೈಲಕೆರೆ, ಬನ್ನಂಜೆ ಗರಡಿ ರಸ್ತೆ, ಕುಂಜಿಬೆಟ್ಟು ಭಾಗದಲ್ಲಿ ನೆರೆ ಸೃಷ್ಟಿಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಪಾಯದಲ್ಲಿ ಸಿಲುಕಿದ್ದ 15ಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಕೃಷ್ಣಮಠ ಬಳಿ ಬೈಲಕೆರೆ ಪ್ರದೇಶದಲ್ಲಿ ಏಳೆಂಟು ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಬನ್ನಂಜೆ-ಗರಡಿ ರಸ್ತೆ ಪರಿಸರದಲ್ಲಿ ಐವತ್ತಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ಎಂಟತ್ತು ಮನೆಗಳಿಗೆ ನೀರು ನುಗ್ಗಿದ್ದು, ಜನರು ಪ್ರವಾಹ ಭೀತಿಯಲ್ಲಿದ್ದಾರೆ. ಬುಧವಾರ ತಡರಾತ್ರಿ, ಗುರುವಾರ ಮುಂಜಾನೆ ಧಾರಾಕಾರ ಮಳೆ ಸುರಿದಿದ್ದು, ಇಂದ್ರಾಣಿ ನದಿ ಉಕ್ಕಿ ಹರಿಯುತ್ತಿದೆ. ಹಲವೆಡೆ ಮಳೆನೀರಿನಿಂದಾಗಿ ಕಾಲುವೆ ಬ್ಲಾಕ್ ಆಗಿ ಕೃತಕ ನೆರೆ ಸೃಷ್ಟಿಯಾಗಿದೆ. ಕುಕ್ಕಿಕಟ್ಟೆ, ಕೆಮ್ತೂರು ಗ್ರಾಮಾಂತರ ಭಾಗದಲ್ಲಿ ಮಳೆ ನೀರಿನಿಂದ ಕೆಲವು ಮನೆಗಳು ಜಲಾವೃತಗೊಂಡಿದೆ. ಉಡುಪಿ ನಗರದ ತಗ್ಗು ಪ್ರದೇಶ, ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ.
ನಗರಸಭೆ ಅಧಿಕಾರಿಗಳ ತಂಡ, ಪೌರಕಾರ್ಮಿಕರ ತುರ್ತು ಕಾರ್ಯಚರಣೆ ತಂಡ ನಗರದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅಗ್ನಿ ಶಾಮಕ ದಳ ತಂಡ ಬೋಟುಗಳು ಸನ್ನದ್ಧವಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿಯ ಕಿದಿಯೂರಿನ ಬಂಕೇರಕಟ್ಟ ಸೇತುವೆಯ ಮೇಲಿಂದ ನೀರು ಹರಿಯುತ್ತಿದೆ. ಕಿದಿಯೂರು ಮಾರ್ಗವಾಗಿ ಉಡುಪಿ, ಮಲ್ಪೆ ಸಂಪರ್ಕಿಸುವ ಸೇತುವೆ ಇದಾಗಿದ್ದು, ನದಿಯಲ್ಲಿನ ಪ್ಲಾಸ್ಟಿಕ್ ಸೇತುವೆ ಭಾಗದಲ್ಲಿ ರಾಶಿಯಾಗಿದೆ.