Advertisement
ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಭಾನುವಾರ ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಸುರಿದ ಮಳೆಯು ತಾಲೂಕಿನ ಹನಗೋಡು ಹೋಬಳಿಯ ಕರಣಕುಪ್ಪೆ, ಕಲ್ಲಹಳ್ಳಿ, ಕೊತ್ತೆಗಾಲ, ಚಿಲ್ಕುಂದ ಗ್ರಾ.ಪಂ.ವ್ಯಾಪ್ತಿಯ ಹರೀನಹಳ್ಳಿ, ಕಣಗಾಲು, ಮುತ್ತುರಾಯನಹೊಸಹಳ್ಳಿ, ಆಡಿಗನಹಳ್ಳಿ, ಚಿಲ್ಕುಂದದದಲ್ಲಿ ಮತ್ತೆ ಬೆಳೆಗಳು ಕೊಚ್ಚಿ ಹೋಗಿದ್ದು, ಈ ಗ್ರಾಮಗಳಲ್ಲೇ ಅಪಾರ ನಷ್ಟವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದ್ದು ಗ್ರಾಮಸ್ಥರು ನಲುಗಿ ಹೋಗಿದ್ದಾರೆ.
ಭಾನುವಾರ ಮಧ್ಯಾಹ್ನ ಕಣಗಾಲು, ಹರೀನಹಳ್ಳಿ, ಮುತ್ತುರಾಯನಹೊಸಹಳ್ಳಿ, ಕಲ್ಲಹಳ್ಳಿ, ಹುಣಸೇಗಾಲ, ಅತ್ತಿಕುಪ್ಪೆ, ಚಿಲ್ಕುಂದ, ಕೊತ್ತೆಗಾಲ, ಆಡಿಗನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸುರಿದ ಭಾರೀ ಮಳೆಯಿಂದ ಅಪಾರ ಹಾನಿ ಉಂಟಾಗಿದ್ದು, ಕೃಷಿಕರು ಸಂಕಟ ಎದುರಿಸುತ್ತಿದ್ದಾರೆ.
Related Articles
ಮುತುರಾಯನಹೊಸಹಳ್ಳಿಯ ಬೆಟ್ಟದಿಂದ ಅಪಾರ ಪ್ರಮಾಣದ ನೀರು ಹರಿದು ಕಣಗಾಲಿನ ಗೆಂಡೆಕೆರೆ, ಚನ್ನಮ್ಮನಕಟ್ಟೆ, ಹರೀನಹಳ್ಳಿಕೆರೆ, ಮುತತ್ತುರಾಯನಹೊಸಹಳ್ಳಿಕೆರೆ, ಆಡಿಗನಹಳ್ಳಿಕೆರೆ, ನಾಗಮಂಗಲ ಕೆರೆ, ಕಲ್ಲಹಳ್ಳಿಯ ನಾಲ್ಕು ಕೆರೆಗಳು, ಅಲ್ಲದೆ ಚಿಲ್ಕುಂದದ ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಅನೇಕ ಕೆರೆಗಳ ಏರಿ, ಕೋಡಿ ಮೇಲೆ, ಕಣಗಾಲು ಹುನುಗನಹಳ್ಳಿ ರಸ್ತೆ ಮೇಲೆ ನೀರು ಹರಿದಿದೆ.
Advertisement
ಮೀನು ಹಿಡಿದ ಗ್ರಾಮಸ್ಥರು:ಕೆರೆಕಟ್ಟೆಗಳಿಗೆ ಅಪಾರ ಪ್ರಮಾಣದ ಮಳೆ ನೀರು ಹರಿದು ಬಂದಿದ್ದರಿಂದ ಹರೀನಹಳ್ಳಿ ಕೆರೆಯಲ್ಲಿ ಮಳೆ ನಿಂತ ನಂತರ ಸುತ್ತಮುತ್ತಲ ಗ್ರಾಮಸ್ಥರು ಕೂನಿ ಹಾಕಿ ಮೀನು ಹಿಡಿದರು. ಮಕ್ಕಳು ನೀರಿನಲ್ಲಿ ಮಿಂದೆದ್ದರು. ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡುಬೇಕೆಂದು ನೊಂದ ರೈತರು ಆಗ್ರಹಿಸಿದ್ದಾರೆ.