Advertisement

ಸುಳ್ಯ ತಾಲೂಕಿನಾದ್ಯಂತ ಭಾರೀ ಮಳೆ: ರಸ್ತೆಗಳು ಜಲಾವೃತ; ದೇಗುಲದ ಒಳಾಂಗಣಕ್ಕೆ ನುಗ್ಗಿದ ನೀರು

12:25 AM Sep 02, 2022 | Team Udayavani |

ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಗುರುವಾರ ಅಪರಾಹ್ನ ಬಳಿಕ ಸುರಿದ ಭಾರೀ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾದ ಘಟನೆ ನಡೆದಿದೆ. ರಸ್ತೆಗಳು ಜಲಾವೃತಗೊಂಡಿದ್ದು, ದೇವಾಲಯದ ಒಳಾಂಗಣಕ್ಕೂ ನೀರು ನುಗ್ಗಿದೆ.

Advertisement

ಬೆಳ್ಳಾರೆ ಪೇಟೆಯಲ್ಲಿ ಭಾರೀ ಮಳೆಗೆ ಕೆಳಗಿನ ಪೇಟೆಯ ರಸ್ತೆಯಲ್ಲೇ ನೀರು ಹರಿದು ತೋಡಿನಂತಾಯಿತು. ಮಳೆನೀರು ರಸ್ತೆಯಲ್ಲಿ ಹರಿದು ವಾಹನ ಸಂಚಾರಕ್ಕೆ ತೊಡಕಾಯಿತು. ರಸ್ತೆ ಬದಿಯಲ್ಲಿ ನಿಲ್ಲಸಿದ ವಾಹನಗಳು ಭಾಗಶಃ ಮುಳುಗಿದವು. ಕೆಳಗಿನ ಪೇಟೆಯ ರಸ್ತೆ, ಚರಂಡಿ ಮುಳುಗಡೆಗೊಂಡಿದ್ದರಿಂದ ರಸ್ತೆಯಲ್ಲಿ ಸಾಲುದ್ದ ವಾಹನಗಳು ನಿಂತಿದ್ದವು. ಇದರಿಂದ ಜನರು, ವಾಹನ ಸವಾರರು ಸಮಸ್ಯೆ ಅನುಭವಿಸಿದರು. ಕೆಲವು ಅಂಗಡಿಗಳಿಗೂ ರಸ್ತೆಯ ನೀರು ನುಗ್ಗಿ ಸಮಸ್ಯೆ ತಂದೊಡ್ಡಿದೆ. ತಾಸಿಗೂ ಅಧಿಕ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

ಭಾರೀ ಮಳೆ ಸುಳ್ಯದ ನಗರ ವ್ಯಾಪ್ತಿಯಲ್ಲೂ ಪರಿಣಾಮ ಬೀರಿದೆ. ಜಟ್ಟಿಪಳ್ಳ-ಬೊಳಿಯಮಜಲು- ಕೊಡಿಯಾಲಬೈಲು ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಅನುಭವಿಸಿದರು.

ದೇಗುಲದ ಒಳಾಂಗಣಕ್ಕೆ ನೀರು :

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇಗುಲದ ಒಳಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ನೀರು ಒಮ್ಮೆಲೆ ಚರಂಡಿಯಿಂದ ಹೊರಭಾಗದಲ್ಲಿ ಹರಿದು ಒಳಾಂಗಣಕ್ಕೆ ನುಗ್ಗಿದೆ. ಮಳೆಗೆ ಈ ರೀತಿ ಅವಾಂತರ ಸೃಷ್ಟಿಯಾಗಲು ಅಸಮರ್ಪಕ ಚರಂಡಿ ವ್ಯವಸ್ಥೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಬೆಳ್ಳಾರೆ ಪೇಟೆಯಲ್ಲಿ ಚರಂಡಿಗಳು ವ್ಯವಸ್ಥಿತವಾಗಿಲ್ಲದೇ ಜೋರು ಮಳೆ ಬಂದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ಸಮಸ್ಯೆ ಉಂಟಾಗುತ್ತಿವೆ.

Advertisement

ವಿವಿಧೆಡೆ ಅಪಾರ ಹಾನಿ :

ಬುಧವಾರದ ಭಾರೀ ಗಾಳಿ ಮಳೆಗೆ ಪಂಬೆತ್ತಾಡಿ, ಕಲ್ಮಡ್ಕ ಪರಿಸರದಲ್ಲಿ ಅಪಾರ ಹಾನಿ ಸಂಭವಿಸಿದೆ. ಪಂಬೆತ್ತಾಡಿ ಗ್ರಾಮದ ಅರಮನೆಕಟ್ಟ ಗಿರೀಶ್‌, ಜಾಕೆ ಬಾಲಣ್ಣ, ಮಂಚಿಕಟ್ಟೆ ವಾರಿಜಾ, ಕಲ್ಮಡ್ಕ ಗ್ರಾಮದ ಪರಮೇಶ್ವರ ಕಾಚಿಲ, ಸರಸ್ವತಿ ಬ್ರಾಂತಿಗದ್ದೆ, ಕಾಂತಪ್ಪ ಅಜಿಲ ಬೊಮ್ಮೆಟ್ಟಿ, ಬೊಳ್ಳೆಚ್ಚಿ ಕಲ್ಮಡ್ಕ ಮೊದಲಾದವರ ಮನೆಗೆ ಹಾನಿಯಾಗಿದೆ. ಕೆಲವೆಡೆ ಮನೆಗೆ ಮರ ಬಿದ್ದು ಹಾನಿಯಾಗಿದೆ. ಅಡಿಕೆ ಮರ, ತೆಂಗಿನ ಮರ ಧರೆಗುರುಳಿ ನಷ್ಟ ಸಂಭವಿಸಿದೆ. ಹಲವೆಡೆ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು. ಮೆಸ್ಕಾಂ, ಕಂದಾಯ, ಅರಣ್ಯ ಇಲಾಖೆ, ಶೌರ್ಯ ವಿಪತ್ತು ಘಟಕ, ಸ್ಥಳೀಯರು, ಗ್ರಾ.ಪಂ.ನವರು ಮರ ತೆರವು, ಸೇರಿದಂತೆ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಹಾನಿಯಾಗಿರುವ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next