ರಾಮನಗರ: ಜಿಲ್ಲಾದ್ಯಂತ ಕಳೆದ ವಾರದಿಂದ ಸುರಿಯು ತ್ತಿರುವ ಧಾರಾಕಾರ ಮಳೆಗೆ ಇಳೆ ತಂಪಾಗಿದ್ದು, ಹಳ್ಳ- ಕೊಳ್ಳಗಳಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ ಒಂದೊಂದೆ ಕೆರೆಗಳು ತುಂಬಿ ಕೋಡಿ ಬೀಳಲಾರಂಭಿಸಿವೆ. ಕ
ಳೆದ ಎರಡು ತಿಗಳಿಂದಲೂ ಆಗಿಂದಾಗ್ಗೆ ಮಳೆ ಆಗುತ್ತಿದ್ದರೂ, ಹಳ್ಳಕೊಳ್ಳಗಳಲ್ಲಿ ರಭಸದಿಂದ ನೀರು ಹರಿದಿರಲಿಲ್ಲ. ಕಳೆದ ಐದಾರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ದಿಂದ ಹಳ್ಳಗಳು ಮೈದುಂಬಿ ಹರಿಯು ತ್ತಿವೆ. ಇದರಿಂದ ಕೆರೆ-ಕುಂಟೆಗಳು ತುಂಬಿ ಹರಿಯ ತೊಡಗಿವೆ.
ಕೈಲಾಂಚ ಹೋಬಳಿ ಬೆಟ್ಟ ಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿದ್ದು, ಅರ್ಕಾವತಿ ನದಿ ತೀರದ ಪ್ರದೇಶ ಬಿಟ್ಟರೆ ಬಹುಪಾಲು ಬೆಟ್ಟಗಳ ಸಾಲೇ ಕಾಣುತ್ತದೆ. ಈ ಪ್ರದೇಶದಲ್ಲಿ ಹಲವು ಸಣ್ಣ ಮತ್ತು ದೊಡ್ಡ ದೊಡ್ಡ ಕೆರೆಗಳು ನಿರ್ಮಾಣವಾಗಿದ್ದು, ಅವುಗಳು ಅಂತರ್ಜಲ ರಕ್ಷಣೆಗೆ ಪ್ರಮುಖ ಪಾತ್ರ ವಹಿಸಿವೆ. ಅಲ್ಲದೆ, ಹಲವು ಗ್ರಾಮಗಳ ಕುಡಿಯುವ ನೀರಿನ ಬವಣೆ ರೈತರ ಬೋರ್‌ವೆಲ್‌ಗಳ ಜೀವಾಳ ಕೂಡ ಈ ಕೆರೆಗಳಾಗಿವೆ.
ಭರ್ತಿಯಾದ ಕೆರೆಗಳು: ಮಳೆ ಇಲ್ಲದ ಕಾರಣ ಅನೇಕ ವರ್ಷಗಳು ಕೆರೆಗಳು ತುಂಬಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಒಂದಷ್ಟು ಮಳೆಯಾಗಿದ್ದ ಕಾರಣ ಕಳೆದ ವರ್ಷ ಮೂರ್‍ನಾಲ್ಕು ಕೆರೆಗಳು ಕೋಡಿ ಬಿದ್ದಿದ್ದವು. ಈ ವರ್ಷ ಧಾರಾಕಾರವಾಗಿ ಮಳೆಯಾಗುತ್ತಿರುವ ಕಾರಣ ಮುಂಗಾರು ಪ್ರಾರಂಭದಲ್ಲೇ ಹುಣಸನಹಳ್ಳಿ ಮದಗದ ಕೆರೆ, ತುಂಬೇನಹಳ್ಳಿ ಕೆರೆ, ಕೆ.ಜಿ. ಹೊಸಹಳ್ಳಿ ಅಂಗಡಿ ಕೆರೆ, ಚನ್ನಮಾನಹಳ್ಳಿ ಚನ್ನಮ್ಮನ ಕೆರೆ ಭರ್ತಿಯಾಗಿ ಕೋಡಿ ಹರಿದಿವೆ.
ರೇವಣಸಿದ್ದೇಶ್ವರ ಬೆಟ್ಟದ ಹೊಸಕೆರೆ, ಅವ್ವೆರಹಳ್ಳಿ ಕೆರೆ, ನಾಗಲಾಪುರ ಕೆರೆ, ತೆಂಗಿನ ಕಲ್ಲು ಕೆರೆಗಳು ಕೋಡಿ ಬೀಳುವ ಹಂತ ತಲುಪಿವೆ. ವರುಣಾರ್ಭಟ ಹೀಗೆ ಮುಂದುವರಿದರೆ ಇನ್ನಷ್ಟು ಕೆರೆಗಳು ಭರ್ತಿಯಾಗಲಿದ್ದು, ರೈತರಿಗೆ ಒಂದಷ್ಟು ಖುಷಿ ತರಿಸಲಿದೆ. ನೀರಿನ ಬವಣೆ, ಅಂತರ್ಜಲ ರಕ್ಷಣೆಗೆ ಸಹ ಕಾರಿಯಾಗಲಿವೆ. ಅಂತೆಯೇ ಮನೆ ಮಠಗಳು ಸೇರಿದಂತೆ ಪ್ರವಾಹಭೀತಿ ಆತಂಕ ಕೂಡ ಮನೆ ಮಾಡಿದೆ.
ಅನಾಹುತ ಆಗಿರುವ ಪ್ರದೇಶಕ್ಕೆ ಭೇಟಿ ನೀಡಿ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಮೋರಿ, ಬ್ರಿಡ್ಜ್ಗಳು ಕೊಚ್ಚಿ ಹೋಗಿವೆ. ಜಮೀನುಗಳಿಗೆ ನೀರು ನುಗ್ಗಿ ಫಸಲು ನಾಶದ ಜೊತೆಗೆ ಮರಗಳು ಕೂಡ ಧರೆಗುರುಳಿ ರೈತರನ್ನ ಸಂಕಷ್ಟಕ್ಕೀಡು ಮಾಡಿದ್ದು, ಕೂಡಲೇ ಅಧಿಕಾರಿಗಳು ಮತ್ತು ಜಿಲ್ಲಾಢಳಿತ ಸರ್ಕಾರ ಗಮನ ಹರಿಸಿ ಪ್ರಾಕೃತಿಕ ವಿಕೋಪ ತಡೆಗೆ ಶ್ರಮಿಸಬೇಕು. ಅನಾಹುತವಾಗಿರುವ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.