ಪಾಂಡವಪುರ: ಮಳೆ ನೀರು ಕೋಳಿ ಫಾರಂಗೆ ನುಗ್ಗಿ ಸುಮಾರು 7 ಸಾವಿರ ಕೋಳಿ ಮರಿ ಮೃತಪಟ್ಟಿರುವ ಘಟನೆ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಚಂದ್ರೆ ಗ್ರಾಮದ ಸ್ವಾಮಿಗೌಡ ಎಂಬವರಿಗೆ ಸೇರಿದ ಕೋಳಿ ಫಾರಂನಲ್ಲಿಯೇ ಕೋಳಿ ಮರಿಗಳು ಮೃತಪಟ್ಟು 6ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
ಅಪಾರ ನಷ್ಟ: ಮಳೆ ನೀರು ಹಾಗೂ ಹೇಮಾವತಿ ನಾಲೆ ನೀರು ಚಂದ್ರೆ ಗ್ರಾಮದ ಹೊರವಲಯದ ಸ್ವಾಮಿಗೌಡ ಎಂಬವರ ಕೋಳಿ ಫಾರಂಗೆ ನುಗ್ಗಿದೆ. ಫಾರಂನಲ್ಲಿ ಈಗಷ್ಟೆ 20 ದಿನಗಳ ಸುಮಾರು 7 ಸಾವಿರ ಕೋಳಿ ಮರಿ ಸಾಕಾಣಿಕೆ ಮಾಡಲಾಗುತ್ತಿತ್ತು. ಫಾರಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಫಾರಂನಲ್ಲಿದ್ದ 20 ದಿನಗಳ 7 ಸಾವಿರ ಕೋಳಿ ಮರಿಗಳು ಸಂಪೂರ್ಣವಾಗಿ ನೀರಿನಲ್ಲಿ ಮೃತಪಟ್ಟಿವೆ.
ಇದರಿಂದ ರೈತ ಸ್ವಾಮಿಗೌಡ ಅವರಿಗೆ ಸುಮಾರು 6 ಲಕ್ಷಕ್ಕೂ ಹೆಚ್ಚಿನ ನಷ್ಟ ಉಂಟಾಗಿದೆ. ಈಗಷ್ಟ ಸಾಲ ಮಾಡಿ ಫಾರಂ ನಡೆಸಿ ಕೋಳಿ ಸಾಕಾಣಿಕೆ ಮಾಡುತ್ತಿದ್ದೆ. ಮಳೆಯಿಂದಾಗಿ ಕೋಳಿ ಮೃತಪಟ್ಟಿದ್ದು ದಿಕ್ಕು ತೋಚದಂತಾಗಿದೆ.
ಘಟನೆಯಿಂದ ಲಕ್ಷಾಂತರ ರೂ.ನಷ್ಟ ಉಂಟಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪರಿಹಾರ ದೊರಕಿಸಿಕೊಡುವ ಮೂಲಕ ಕಷ್ಟ ನೆರವಾಗಬೇಕೆಂದು ರೈತ ಸ್ವಾಮಿಗೌಡ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.