ಮಂಗಳೂರು/ಉಡುಪಿ/ಕಾಸರಗೋಡು : ಬಂಗಾಲ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಕರಾವಳಿಯಲ್ಲಿ ಮಳೆ ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಾದ್ಯಂತ ಬುಧವಾರ ದಿನವಿಡೀ ಉತ್ತಮ ಮಳೆಯಾಗಿದೆ.
ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮಂಗಳವಾರ ತಡರಾತ್ರಿಯೇ ಆರಂಭಗೊಂಡ ಮಳೆ ಬುಧವಾರ ದಿನವಿಡೀ ಉತ್ತಮವಾಗಿ ಸುರಿದಿದೆ. ರಾತ್ರಿ ಮಳೆಯ ಬಿರುಸು ಜೋರಾಗಿತ್ತು. ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿದೆ. ಉಳಿದಂತೆ ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಜಾಲೂÕರು, ಕಲ್ಮಕಾರು, ಐನೆಕಿದು, ಹರಿಹರ ಪಲ್ಲತ್ತಡ್ಕ, ಧರ್ಮಸ್ಥಳ, ನಾರಾವಿ, ಮಡಂತ್ಯಾರು, ಬೆಳ್ತಂಗಡಿ, ಬಂಟ್ವಾಳ, ಕನ್ಯಾನ, ಸುರತ್ಕಲ್, ಉಳ್ಳಾಲ, ಮೂಡುಬಿದಿರೆ, ಬಜಪೆ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದಿದೆ.
ಉಡುಪಿ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ, ಗುರುವಾರ ಹಲವೆಡೆ ನಿರಂತರ ಮಳೆ ಸುರಿದಿದೆ. ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ಮೊದಲಾದ ಭಾಗದಲ್ಲಿ ಬಿಟ್ಟುಬಿಟ್ಟು ಮಳೆಯಾಗಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಬೆಳಗ್ಗೆಯಿಂದ ಸಂಜೆ ವರೆಗೂ ಧಾರಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿದೆ. ಇಂದ್ರಾಳಿ, ಎಂಜಿಎಂ, ಮಣಿಪಾಲ ಅಂಚೆ ಕಚೇರಿ ಸಮೀಪ, ಲಕ್ಷ್ಮೀಂದ್ರನಗರ ಹೆದ್ದಾರಿ ರಸ್ತೆಗಳಲ್ಲಿ ಮಳೆ ನೀರು ಸಾಕಷ್ಟು ಪ್ರಮಾಣದಲ್ಲಿ ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.
ಆರೆಂಜ್ ಅಲರ್ಟ್
ಕರಾವಳಿಯಲ್ಲಿ ಉತ್ತಮ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಆ. 25ರಂದು “ಎಲ್ಲೋ ಅಲರ್ಟ್’ ಮುಂದುವರಿದಿದೆ. ಈ ವೇಳೆ ಬಿರುಸಿನ ಮಳೆಯ ಜತೆ ಗಾಳಿ, ಸಮುದ್ರದ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ. ಕಾಸರಗೋಡು, ಮಲಪ್ಪುರಂ, ತೃಶ್ಶೂರು, ಇಡುಕ್ಕಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.