ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಪರಿಸ್ಥಿತಿಯಿಂದ ಕೃಷಿಕ ವರ್ಗ ಕಂಗೆಟ್ಟಿದೆ.
ಆರರಿಂದ ಎಂಟು ತಿಂಗಳು ಮಳೆಗಾಲದಲ್ಲೇ ಕಳೆಯುವ ಕೊಡಗು ಜಿಲ್ಲೆ ಉಳಿದ ನಾಲ್ಕಾರು ತಿಂಗಳಲ್ಲಾದರೂ ಚೇತರಿಸಿಕೊಳ್ಳುವ ತವಕದಲ್ಲಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ನಿರೀಕ್ಷೆಗಳೆಲ್ಲವೂ ಹುಸಿಯಾಗುತ್ತಿದ್ದು, ಪ್ರಸ್ತುತ ವರ್ಷ ಮಳೆ ಬಾರದ ತಿಂಗಳೇ ಇಲ್ಲ ಎನ್ನುವ ಪರಿಸ್ಥಿತಿ ಉದ್ಭವಿಸಿದೆ. ಇದರಿಂದಾಗಿ ವಾಣಿಜ್ಯ ಬೆಳೆ ಕಾಫಿ ಕೊಳೆಯುತ್ತಿದೆ, ಭತ್ತ ತೆನೆ ಕಟ್ಟದ ಪರಿಸ್ಥಿತಿಗೆ ಬಂದು ತಲುಪಿದೆ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅಸಾಧ್ಯವಾಗಿದೆ. ರಸ್ತೆಗಳು ಸಂಪೂರ್ಣವಾಗಿ ಹದಗೆಡುತ್ತಿವೆ.
ವನ್ಯಜೀವಿಗಳ ದಾಳಿ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಬೆಳೆಗಾರರಿಗೆ ಹವಾಮಾನದ ವೈಪರೀತ್ಯ ಕೃಷಿಯ ಮೇಲಿನ ಆಸಕ್ತಿಯನ್ನೇ ಕಸಿದುಕೊಂಡಿದೆ.
ಮಳೆಯೊಂದಿಗೆ ಮೈಕೊರೆಯುವ ಚಳಿಯೂ ಇದ್ದು, ಬೆಲೆ ಬಾಳುವ ವಸ್ತುಗಳಿಗೂ ಹಾನಿಯಾಗುತ್ತಿದ್ದು, ವ್ಯಾಪಾರೋದ್ಯಮಿಗಳಿಗೂ ನಷ್ಟವಾಗುತ್ತಿದೆ. ಅತಿಮಳೆಯಿಂದಾಗಿ ಪ್ರವಾಸಿಗರು ಕೂಡ ಕೊಡಗಿನ ಕಡೆ ಮುಖ ಮಾಡದೆ ಇರುವುದರಿಂದ ಪ್ರವಾಸೋದ್ಯಮವನ್ನೇ ನಂಬಿರುವವರಿಗೂ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ : ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ : ಆಸ್ಪತ್ರೆಗಳು ಫುಲ್