ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿದೆ. ಮಳೆಯ ಆರ್ಭಟಕ್ಕೆ ಮರ, ವಿದ್ಯುತ್ ಕಂಬಗಳು, ಬಂಡೆಗಳು ಧರೆಗುರುಳುತ್ತಿದ್ದು, ಬರೆಗಳು ಕುಸಿಯುತ್ತಿವೆ.
ಭಾಗಮಂಡಲ – ತಲಕಾವೇರಿ ರಸ್ತೆ ಗೆ ಬಂಡೆಯೊಂದು ಉರುಳಿ ಬಿದ್ದಿದ್ದು, ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರ ಸಹಾಯ ಪಡೆದು ಬಂಡೆಯನ್ನು ತೆರವುಗೊಳಿಸಲಾಯಿತು. ಮೊಣ್ಣಂಗೇರಿ ಬಳಿ ಹೆದ್ದಾರಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಭಾಗಮಂಡಲ ಹೋಬಳಿ ಚೇರಂಗಾಲ ಗ್ರಾಮದ ಲೋಕಪ್ರಕಾಶ್ ಅವರ ಮನೆಯ ಬಳಿ ಬರೆ ಕುಸಿದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕೊಠಡಿ ಕುಸಿದು ವೃದ್ಧೆ ಗಂಭೀರ:
ಧಾರಾಕಾರ ಮಳೆಯಿಂದ ಸ್ನಾನದ ಕೊಠಡಿ ಕುಸಿದು ವೃದ್ಧೆ ಗಂಭೀರ ಗಾಯಗೊಂಡ ಘಟನೆ ಶನಿವಾರಸಂತೆಯ ಸುಳುಗಳಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ವಸಂತಮ್ಮ (69) ಗಾಯಗೊಂಡ ವೃದ್ಧೆ. ಎರಡು ಕಾಲು, ಮುಖ ಹಾಗೂ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.