Advertisement

ಕರಾವಳಿ : ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆ : ಹಲವೆಡೆ ಹಾನಿ

11:26 PM May 05, 2022 | Team Udayavani |

ಸುಳ್ಯ : ಕರಾವಳಿಯ ವಿವಿಧೆಡೆ ಮಳೆ ಮುಂದುವರಿದಿದ್ದು, ಹಲವೆಡೆ ಗುರುವಾರ ರಾತ್ರಿಯೂ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್‌ ಪಂದ್ಯಾಟ ಮಾತ್ರವಲ್ಲದೆ ವಿವಿಧೆಡೆ ಜಾತ್ರೆಗಳು, ಕೋಲ, ಯಕ್ಷಗಾನ, ಸಮಾರಂಭಗಳಿಗೆ ಅಡಚಣೆ ಉಂಟಾಯಿತು.

Advertisement

ಗುರುವಾರ ರಾತ್ರಿ 8ರ ಸುಮಾರಿಗೆ ಆರಂಭಗೊಂಡ ಗುಡುಗು ಸಹಿತ ಗಾಳಿ ಮಳೆ ಒಂದು ಗಂಟೆ ಸುರಿದಿದೆ. ಸುಳ್ಯ ಪೇಟೆ, ಬೆಳ್ಳಾರೆ, ಕಲ್ಮಡ್ಕ, ಪಂಜ, ಅರಂತೋಡು, ಗುತ್ತಿಗಾರು, ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಯಾಗಿದೆ. ರಾತ್ರಿಯ ವೇಳೆ ಉಡುಪಿ ಭಾಗದಲ್ಲಿಯೂ ಮಳೆ ಆರಂಭವಾಗಿತ್ತು.

ಪಂದ್ಯಾಟಕ್ಕೆ ಅಡ್ಡಿ
ಬುಧವಾರದಿಂದ ಸುಳ್ಯದಲ್ಲಿ ಹೊನಲು ಬೆಳಕಿನ ರಾಷ್ಟ್ರೀಯ ವಾಲಿಬಾಲ್‌ ಪಂದ್ಯಾಟ ನಡೆಯುತ್ತಿದ್ದು, ಗುರುವಾರ ಒಂದು ಪಂದ್ಯಾಟ ನಡೆಯಿತು. ಅದು ಮುಗಿಯುತ್ತಿದ್ದಂತೆ ಮಳೆ ಆರಂಭಗೊಂಡಿದ್ದು, ಮುಂದಿನ ಪಂದ್ಯಾಟಕ್ಕೆ ಅಡ್ಡಿ ಉಂಟಾಯಿತು.

ವಿದ್ಯುತ್‌ ಕಂಬಗಳಿಗೆ ಹಾನಿ, ವ್ಯತ್ಯಯ
ಬುಧವಾರ ಗುರುವಾರ ಸುರಿದ ಗಾಳಿ ಮಳೆಯಿಂದ ಸುಳ್ಯ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 20 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಅವುಗಳ ದುರಸ್ತಿ ಕಾರ್ಯ ನಡೆಸಿ, ವಿದ್ಯುತ್‌ ಸಂಪರ್ಕ ಸರಿಪಡಿಸಲಾಗಿದೆ. ಸುಳ್ಯ ನಗರ, ಕರಿಕ್ಕಳ, ಎಣ್ಮೂರು, ಮೆಟ್ಟಿನಡ್ಕ, ಕಲ್ಮಡ್ಕ, ಅಯ್ಯನಕಟ್ಟೆ, ಬಾಳಿಲ, ಮಡಪ್ಪಾಡಿ, ಕಂದ್ರಪ್ಪಾಡಿ, ಸುಬ್ರಹ್ಮಣ್ಯ, ಬಿಳೆನೆಲೆ ಭಾಗದಲ್ಲಿ, ಗುರುವಾರ ಹಗಲು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

ಕೆಯ್ಯೂರು: ಸಿಡಿಲಿನಿಂದ ಹಾನಿ
ಕೆಯ್ಯೂರು: ಕೆಯ್ಯೂರು ಗ್ರಾಮದ ಕಾಪುತ್ತಡ್ಕ ನಿವಾಸಿ ಚನಿಯ ಎಂಬವರ ಮನೆಗೆ ಬುಧವಾರ ಸಿಡಿಲು ಬಡಿದಿದ್ದು, ಮನೆ ಬಿರುಕು ಬಿಟ್ಟು, ಮೀಟರ್‌, ವೈರಿಂಗ್‌ ಸಂಪೂರ್ಣ ಸುಟ್ಟು ಹೋಗಿದೆ.

Advertisement

ಕೆಯ್ಯೂರು ಗ್ರಾ.ಪಂ. ಪ್ರಭಾರ ಪಿಡಿಒ ಅಧಿಕಾರಿ ಸುರೇಂದ್ರ ರೈ ಇಳಂತಜೆ, ಅಧ್ಯಕ್ಷೆ ಜಯಂತಿ ಎಸ್‌. ಭಂಡಾರಿ , ಸದಸ್ಯರಾದ ಶರತ್‌ ಕುಮಾರ್‌ ಮಾಡಾವು, ಸುಮಿತ್ರಾ ಪಲ್ಲತ್ತಡ್ಕ, ಕೆಯ್ಯೂರು ಕಂದಾಯ ಇಲಾಖೆ ಗ್ರಾಮಕರಣಿಕೆ ಸ್ವಾತಿ, ಸಹಾಯಕರಾದ ನಾರಾಯಣ ಪಾಟಾಳಿ ದೇರ್ಲ ಭೇಟಿ ನೀಡಿ ಪರಿಶೀಲಿಸಿದರು.

ಆಲಂಕಾರು: ಮನೆಗೆ ಹಾನಿ
ಆಲಂಕಾರು: ಕಡಬ ತಾಲೂಕಿನ ಆಲಂಕಾರು, ರಾಮಕುಂಜ, ಕೊçಲ, ಪೆರಾಬೆ ಭಾಗಗಳಲ್ಲಿ ಬುಧವಾರ ಸಂಜೆ ಗಾಳಿ, ಗುಡುಗು ಸಹಿತ ಮಳೆಯಾಗಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ.
ಅಡಿಕೆ, ತೆಂಗಿನ ಮರಗಳು ಧರೆಗುರುಳಿವೆ. ಹಲವೆಡೆ ವಿದ್ಯುತ್‌ ತಂತಿಗಳ ಮೇಲೆ ಮರ, ಗೆಲ್ಲುಗಳು ಬಿದ್ದು ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಕೊçಲ ಗ್ರಾಮದ ಪಟ್ಟೆ ನಾಣ್ಯಪ್ಪ ಪೂಜಾರಿ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಬೇಬಿ ಆಚಾರಿ ಎಂಬವರ ಮನೆಯ ಹೆಂಚುಗಳು ಹಾರಿ ಹೋಗಿವೆ. ಗುಲ್ಗೊಡಿ ಚೈತ್ರಾ ಎಂಬವರ ಮನೆಯ ಕಿಟಿಕಿ, ಗೋಡೆ, ಶೀಟ್‌ಗಳಿಗೆ ಹಾನಿಯಾಗಿದೆ.

ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷ ಹರ್ಷಿತ್‌ ಕುಮಾರ್‌, ಸದಸ್ಯ ಯತೀಶ್‌ ಸೀಗೆತ್ತಡಿ, ಗ್ರಾಮಕರಣಿಕ ಶೇಷಾದ್ರಿ, ಗ್ರಾಮ ಸಹಾಯಕ ಜಯಂತ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next