Advertisement

Davanagere: ಮಳೆಗಾಗಿ ಪ್ರಾರ್ಥಿಸಿ ದೇವಸ್ಥಾನದ ಎದುರು ನಡೆಸಿದ ಸಂತೆಯ ದಿನವೇ ಸುರಿದ ಮಳೆ

05:34 PM Jul 02, 2023 | Team Udayavani |

ದಾವಣಗೆರೆ: ಮಳೆಗಾಗಿ ಪ್ರಾರ್ಥಿಸಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ಭಾನುವಾರ ಪ್ರಾರಂಭಿಸಿದ ಮೊದಲ ವಾರದ ಸಂತೆಯ ದಿನವೇ ಧೋ…ಎಂದು ಧಾರಾಕಾರ ಮಳೆ ಸುರಿಯಿತು.

Advertisement

ದಾವಣಗೆರೆ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಮಳೆಯಾಗದೇ ಇದ್ದಲ್ಲಿ ದಾವಣಗೆರೆಯ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ಐದು ಭಾನುವಾರ ವಾರದ ಸಂತೆ ನಡೆಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿ. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ವಾರದ ಸಂತೆ ಮಾಡಿದೆ ಮಳೆ ಆಗುವುದು ಕಟ್ಟಿಟ್ಟ ಬುತ್ತಿ ಎಂಬ ಗಾಢವಾದ ನಂಬಿಕೆ ಇದೆ.

ಅದೇ ರೀತಿ ಜುಲೈ ತಿಂಗಳ ಸಮೀಪಿಸಿದರೂ ಮಳೆ ಆಗದೇ ಇರುವುದು ಮಾತ್ರವಲ್ಲ ಮಳೆಯ ಸುಳಿವೇ ಇಲ್ಲ ವಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಹದವಾದ ಮಳೆ ಆಗದಿರುವುದು ರೈತಾಪಿ ವರ್ಗಕ್ಕೆ ಮಾತ್ರವಲ್ಲ ರೈತರು ಬೆಳೆಯುವಂತಹ ಬೆಳೆಗಳ ಮೇಲೆ ನಿರ್ಧರಿತವಾಗಿರುವ ಎಲ್ಲ ಕ್ಷೇತ್ರದಲ್ಲೂ ಭಾರೀ ಅಡ್ಡ ಪರಿಣಾಮ ಉಂಟು ಮಾಡುವುದರ ಬಗ್ಗೆ ಜನರು ಯೋಚನೆ ಮಾಡುವಂತಹ ವಾತಾವರಣ ನಿರ್ಮಾಣವಾಗಿತ್ತು.

ಮಳೆಗಾಗಿ ಪ್ರಾರ್ಥಿಸಿ ದಾವಣಗೆರೆ ಒಳಗೊಂಡಂತೆ ಅನೇಕ ಭಾಗದಲ್ಲಿ ವಿಶೇಷ ಪೂಜೆ ಇತರೆ ಆಚರಣೆಗಳನ್ನು ಜನರು ಆಚರಿಸಿದ್ದರು. ಆದರೂ, ಉತ್ತಮ ಮಳೆ ಕನಸಿನಂತಾಗಿತ್ತು. ಒಂದು ಕಡೆ ಧೋ ಎಂದು ಮಳೆ ಸುರಿದರೆ ಇನ್ನೊಂದು ಕಡೆ ಒಂದೇ ಒಂದು ಹನಿ ಬೀಳದ ವಾತಾವರಣವೂ ಜನರ ಅನುಭವಕ್ಕೆ ಬಂದಿತ್ತು.

ಕೆಲವೇ ದಿನಗಳ ಹಿಂದೆಯಷ್ಟೇ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಎಡೆ ಜಾತ್ರೆ ಸಹ ನೆರವೇರಿಸಲಾಗಿತ್ತು. ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಭಕ್ತಾದಿ ಗಳ ಮನೆಯಲ್ಲಿ ತಯಾರಿಸಿದ್ದಂತಹ ಹೋಳಿಗೆ, ಪಾಯಸ, ಇತರೆ ಖಾದ್ಯಗಳನ್ನು ದೇವಿಗೆ ನೈವೇದ್ಯ ರೂಪದಲ್ಲಿ ಸಮರ್ಪಣೆ ಮಾಡಲಾಗಿತ್ತು. ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿರಲಿಲ್ಲ.

Advertisement

ಹಾಗಾಗಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳ ಟ್ರಸ್ಟ್, ಮಹಾನಗರ ಪಾಲಿಕೆ ಇತರೆಯವರು ಚರ್ಚಿಸಿ, ಜು. 2 ರಿಂದ ಅಂದರೆ ಭಾನುವಾರದಿಂದ ಐದು ವಾರಗಳ ಕಾಲ ವಾರದ ಸಂತೆಯನ್ನ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ಮಾಡುವ ತೀರ್ಮಾನ ಕೈಗೊಂಡಿದ್ದರು.

ಅದರಂತೆ ಮಂಡಿಪೇಟೆ ಇತರೆ ಭಾಗದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ನಡೆಸಲಾಯಿತು. ಕಾಕತಾಳಿಯವೋ, ಮಳೆಯ ದೇವತೆ ಎಂದೇ ಕರೆಯಲ್ಪಡುವ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಬಗ್ಗೆ ಜನರಲ್ಲಿ ಇರುವ ನಂಬಿಕೆ ಯ ಪ್ರತಿಫಲವೋ ಎನ್ನುವಂತೆ ವಾರದ ಸಂತೆ ಪ್ರಾರಂಭಿಸಿದ ಕೆಲವೇ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬಂದಿತು. ಮಧ್ಯಾಹ್ನ ಭರ್ಜರಿ ಮಳೆ ಆಗಿತು. ಬಹಳಷ್ಟು ದಿನಗಳಿಂದ ಮಳೆಯ ಕಣ್ಣಾಮುಚ್ಚಾಲೆಯಾಟದಿಂದ ಆತಂಕಕ್ಕೆ ಒಳಗಾಗಿದ್ದ ಜನರಲ್ಲಿ ಮಳೆ ಸಂಭ್ರಮಕ್ಕೆ ಕಾರಣವಾಯಿತು. ದಾವಣಗೆರೆ ಇತರೆ ಭಾಗದಲ್ಲೂ ಮಳೆಯಾಗಿದೆ.

ದಾವಣಗೆರೆ ದುಗ್ಗಮ್ಮನನ್ನ ಮಳೆ ದೇವತೆ ಅಂತಾನೇ ಕರೆಯುತ್ತಾರೆ. ಮಳೆ ಆಗದೇ ಇದ್ದಾಗ ಎಲ್ಲರೂ ಸೇರಿ ಕೊಂಡು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ಭಾನುವಾರ ನಡೆಯುವಂತಹ ವಾರದ ಸಂತೆ ಮಾಡಲು ನಿರ್ಧರಿಸುತ್ತಾರೆ. ವಾರದ ಸಂತೆ ಮಾಡಿದ ದಿನವೇ ಇಲ್ಲ ಎಂದರೆ ಐದು ವಾರದ ಸಂತೆ ಮುಗಿ ಯುವ ಹೊತ್ತಿಗೆ ಸಾಕಷ್ಟು ಮಳೆಯಾಗಿದೆ. ಮಳೆ ಆಗದೇ ಇರುವುದು. ವಾರದ ಸಂತೆ ನಡೆಸಿದ ಮೇಲೆ ಮಳೆ ಆಗಿರುವುದನ್ನ ನಾವೇ ನೋಡಿದ್ದೇವೆ. ಅದೇನೋ ಏನೋ ವಾರದ ಸಂತೆ ಮಾಡಿದರೆ ಮಳೆ ಖಾಯಂ ಆಗೇ ಆಗುತ್ತದೆ. ಅಮ್ಮ ಎಂದೆಂದಿಗೂ ನಂಬಿದವರ ಕೈ ಬಿಡುವುದೇ ಇಲ್ಲ ಎಂದು ಸಂತೆಗೆ ಬಂದಿದ್ದಂತಹ ಅನೇಕರು ಅನುಭವ ಹಂಚಿಕೊಂಡರು.

ಸಂಜೆಯೂ ಮಳೆ ಬಂದಿತು. ಮೋಡ ಮುಸುಕಿದ ವಾತಾವರಣವೂ ಮುಂದುವರೆದಿತ್ತು. ಬಹು ದಿನಗಳ ನಂತರ ಜನರಿಗೆ ಮಳೆಗಾಲದ ಅನುಭವ ಆಗುತ್ತಿದೆ. ಮೊದಲ ವಾರದ ಸಂತೆ ದಿನ ಮಳೆಯಾದರೂ ಸಂತೃಪ್ತಿ ಎನ್ನುವಷ್ಟು ಮಳೆ ಆಗುವವರೆಗೆ ವಾರದ ಸಂತೆ ನಡೆಸಲಾಗುತ್ತದೆ. ಮಳೆಯಿಂದ ಜನರು ಖುಷಿಯಾಗಿದ್ದಾರೆ.

ಇದನ್ನೂ ಓದಿ: Beauty Parlour ಹೋದ ವಧು ಬರಲೇ ಇಲ್ಲ… ಹುಡುಗಿಗಾಗಿ ಮಂಟಪದಲ್ಲಿ ಕಾದು ಕಾದು ಸುಸ್ತಾದ ವರ

Advertisement

Udayavani is now on Telegram. Click here to join our channel and stay updated with the latest news.

Next