Advertisement

ಕರಾವಳಿಯಲ್ಲೆಡೆ ಉತ್ತಮ ಮಳೆ; ಸಿಡಿಲಿಗೆ ಓರ್ವ ಸಾವು : ಜೂ.12ಕ್ಕೆ ಎಲ್ಲೋ ಅಲರ್ಟ್‌

10:42 PM Jun 11, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ಗುಡುಗು ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದೆ.

Advertisement

ಮಂಗಳೂರು ನಗರದಲ್ಲಿ ಸಂಜೆ ಬಳಿಕ ಮಳೆ ಬಿರುಸು ಪಡೆದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ನಗರದ ಬಹುತೇಕ ಕಡೆಗಳಲ್ಲಿ ಸ್ಮಾರ್ಟ್‌ಸಿಟಿ, ಗೈಲ್‌ ಗ್ಯಾಸ್‌ಲೈನ್‌ ಸೇರಿದಂತೆ ಪಾಲಿಕೆಯ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಕೆಲವು ಕಡೆ ರಸ್ತೆಯಲ್ಲೇ ನೀರು ನಿಂತಿತ್ತು. ಉತ್ತಮ ಮಳೆಯ ಪರಿಣಾಮ ಮತ್ತು ವೀಕೆಂಡ್‌ ಹಿನ್ನೆಲೆಯಲ್ಲಿ ನಗರದ ಕೊಡಿಯಾಲ್‌ಬೈಲ್‌, ಪಂಪ್‌ವೆಲ್‌, ನಂತೂರು, ಕೊಟ್ಟಾರಚೌಕಿ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌, ಕೆ.ಎಸ್‌. ರಾವ್‌ ರಸ್ತೆ, ಎಂ. ಜಿ. ರಸ್ತೆ ಸಹಿತ ಕೆಲವು ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಜಿಲ್ಲೆಯ ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು, ಧರ್ಮಸ್ಥಳ, ಚಾರ್ಮಾಡಿ, ನಾರಾವಿ, ವೇಣೂರು, ಬಂಟ್ವಾಳ, ಮಾಣಿ, ವಿಟ್ಲ, ಕನ್ಯಾನ, ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ಸುಬ್ರಹ್ಮಣ್ಯ, ಗುತ್ತಿಗಾರು, ಕಲ್ಮಕಾರು, ಪಂಜ, ಬೆಳ್ಳಾರೆ, ಮೂಡುಬಿದಿರೆ, ಉಳ್ಳಾಲ, ಸುರತ್ಕಲ್‌ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ಇದನ್ನೂ ಓದಿ : ಮರ ಬಿದ್ದರೂ ಜಗ್ಗದ ಟೆಸ್ಲಾ ಕಾರು, ಇದು ವಿಶ್ವದ ಅತಿ ಸುರಕ್ಷಿತ ಕಾರು : ಎಲಾನ್‌ ಮಸ್ಕ್

ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಉತ್ತಮ ಮಳೆಯಾಗಿದೆ. ಉಡುಪಿ, ಮಣಿಪಾಲ, ಪಡುಬಿದ್ರಿ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾರ್ಕಳ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ.

Advertisement

ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಮಂಗಳೂರಿನಲ್ಲಿ ಶನಿವಾರ 29.1 ಡಿ.ಸೆ. ಗರಿಷ್ಠ ಮತ್ತು 23. 2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಜೂ.12 ಕ್ಕೆ ಎಲ್ಲೋ ಅಲರ್ಟ್‌
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜೂ.12 ರಿಂದ 15ರ ವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ “ಎಲ್ಲೋ ಅಲರ್ಟ್‌’ ಘೊಷಿಸಲಾಗಿದೆ. ಈ ವೇಳೆ ಗುಡುಗು ಸಿಡಿಲಿನಿಂದ ಬಿರುಸಿನ ಮಳೆಯಾಗುವ ನಿರೀಕ್ಷೆ ಇದೆ. ಈ ವೇಳೆ ಗಾಳಿಯ ವೇಗ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ.

ಬೆಳ್ತಂಗಡಿ: ಮರ ಬಿದ್ದು ವಿದ್ಯುತ್‌ ತಂತಿಗೆ ಹಾನಿ
ಬೆಳ್ತಂಗಡಿ: ತಾಲೂಕಿನಲ್ಲಿ ಮಧ್ಯಾಹ್ನ ಅನಂತರ ಭಾರೀ ಮಳೆ ಸುರಿದಿದ್ದು ಕೆಲವೆಡೆ ಗಾಳಿ ಸಹಿತ ಮಳೆಯಾಗಿದೆ. ಬಹುತೇಕ ಕಡೆ ರಸ್ತೆ ಚರಂಡಿ ಹೂಳೆತ್ತದ ಪರಿಣಾಮ ರಸ್ತೆಯಲ್ಲೇ ಪ್ರವಾಹದಂತೆ ನೀರು ನಿಂತಿರುವುದು ಕಂಡುಬಂತು.

ಬೆಳ್ತಂಗಡಿಯ ಹಳೇ ಸೇತುವೆ ರಸ್ತೆಯ ಅಂಬೇಡ್ಕರ್‌ ಭವನದ ಬಳಿ ಸಂಜೆ ಬೃಹದಾಕಾರದ ಮರವೊಂದು ರಸ್ತೆಗೆ ಉರುಳಿ ಬಿದ್ದು ವಿದ್ಯುತ್‌ ಕಂಬಗಳು ತುಂಡಾಗಿ ಬಿದ್ದಿವೆ. ಹಗಲು ಹೊತ್ತಿನಲ್ಲಿ ಮರದಡಿ ಬಸ್‌ ಹಾಗೂ ಇತರ ವಾಹನಗಳು ಹಾಗೂ ಜನ ಸಂಚಾರ ಇರುತ್ತಿತ್ತು. ಅದೃಷ್ಟವಶಾತ್‌ ಮರ ಉರುಳಿದ ವೇಳೆ ಯಾವುದೇ ವಾಹನ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ. ಮೆಸ್ಕಾಂ ಸಿಬಂದಿ ಮರ ತೆರವುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next