ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರ ನೆಮ್ಮದಿ ಭಂಗವಾಗಿದೆ ಇನ್ನೂ ರೈತರ ಸ್ಥಿತಿ ಕೇಳುವ ಹಾಗೆ ಇಲ್ಲ. ಹೌದು ಜಿಲ್ಲೆಯಲ್ಲಿ ದಿನೇದಿನೇ ಮಳೆ ಹೆಚ್ಚಾಗುತ್ತಿದ್ದು ಜಿಲ್ಲಾ ಮತ್ತು ತಾಲೂಕು ಆಡಳಿತಗಳು ನಾಗರಿಕರಿಗೆ ಜಾಗೃತಿಯಿಂದ ಇರಬೇಕೆಂದು ಈಗಾಗಲೇ ಮುನ್ಸೂಚನೆಯನ್ನು ನೀಡಿದ್ದಾರೆ ಶಿಥಿಲ ವ್ಯವಸ್ಥೆಯಲ್ಲಿರುವ ಮನೆಗಳಲ್ಲಿ ಯಾರು ವಾಸ ಇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್. ಎಂ.ನಾಗರಾಜ್ ಅವರು ಮಳೆಯಿಂದ ಆಗಿರುವ ತೊಂದರೆಯನ್ನು ಖುದ್ದಾಗಿ ಅವಲೋಕನ ಮಾಡಿದ್ದಾರೆ ಜೊತೆಗೆ ಮುಚ್ಚಿರುವ ಕಾಲುವೆಗಳನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮತ್ತೂಂದೆಡೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆಗಳು ಮತ್ತು ಚೆಕ್ ಡ್ಯಾಂಗಳು ಮೈದುಂಬಿ ಹರಿಯುತ್ತಿದ್ದು ಮಳೆನಾಡಿನ ವೈಭವ ಕಂಡುಬರುತ್ತದೆ ಜಿಲ್ಲೆಯಲ್ಲಿ ಈ ಹಿಂದೆ ನರೇಗಾ ಯೋಜನೆ ಅಡಿ ನಿರ್ಮಿಸಿರುವ ಬಹುಕಮಾನ್ ಚಟ್ಟಾಮಗಳೂ ಭರ್ತಿಯಾಗಿದ್ದು ಅಂತರ್ಜಲಮಟ್ಟ ಅಭಿವೃದ್ಧಿಯಾಗಿದೆ.
ಮಳೆ ಆರ್ಭಟದಿಂದಾಗಿ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅನೇಕ ರೀತಿಯ ಸಂಕಷ್ಟಗಳನ್ನು ತಂದೊಡ್ಡಿದೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ ಇನ್ನೂ ಒಳ್ಳೆಯ ಮನೆಗಳು ಸಹ ಜಡಿ ಮತ್ತು ಧಾರಾಕಾರ ಮಳೆಯಿಂದ ಸುರಿಯಲು ಆರಂಭಿಸುವೆ ಇದರಿಂದ ನಾಗರೀಕರು ಆತಂಕಗೊಂಡಿದ್ದಾರೆ.
ಚಿತ್ರಾವತಿ ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವಾಹನ ಸವಾರರನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡಲಾಗಿದೆ ಜೊತೆಗೆ ಕೆರೆಗಳ ಬಳಿ ಮಕ್ಕಳನ್ನು ಯಾರಿಗೆ ಸಹ ಕಳಿಸಬಾರದು ಎಂದು ಸೂಚನೆ ಸಹ ನೀಡಲಾಗಿದೆ ಇತ್ತೀಚಿಗೆ ಚಿಂತಾಮಣಿ ತಾಲೂಕಿನಲ್ಲಿ ಮೂವರು ಬಾಲಕರು ಕೆರೆಯಲ್ಲಿ ಈಜಾಡಲು ಹೋಗಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬಹುತೇಕ ಹೊಲಗದ್ದೆಗಳು ಜಲಾವೃತಗೊಂಡಿದ್ದು ಸಾಲ ಮಾಡಿ ಇಟ್ಟಿದ್ದ ಬೆಳೆಗಳು ಸಹ ನೀರು ಪಾಲಾಗಿವೆ ಜಿಲ್ಲಾ ಮತ್ತು ತಾಲೂಕುಗಳ ರೈತರು ಮತ್ತು ಜನಸಾಮಾನ್ಯರು ಅನುಭವಿಸಿರುವ ಕಷ್ಟ ಮತ್ತು ನಷ್ಟವನ್ನು ಅವಲೋಕನ ಮಾಡಿ ಕೂಡಲೇ ಪರಿಹಾರ ನೀಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.