ಬೆಳಗಾವಿ : ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಾಕತಿ ಗ್ರಾಮದ ರೈತನೋರ್ವ ಮಾರ್ಕಂಡೇಯ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆಪಿಟಿಸಿಎಲ್ ನಿವೃತ್ತ ಸಿಪಾತಿ ಹಾಗೂ ರೈತ ಸಿದ್ರಾಯಿ ದೊಡ್ಡರಾಮ ಸುತಗಟ್ಟಿ(65) ಎಂಬಾತ ನಿರಿನಲ್ಲಿಕೊಚ್ಚಿ ಹೋಗಿದ್ದಾನೆ ಎಂದು ಶಂಕಿಸಲಾಗಿದೆ. ಈತನ ಹೊಲದ ಮಾರ್ಗದಲ್ಲಿ ಇರುವ ಬ್ರಿಡ್ಜ್ ಕಂ ಬಾಂದಾರ್ ಬಳಿ ಈತನ ಚಪ್ಪಲಿ ಸಿಕ್ಕಿದ್ದು, ನೀರಿನ ಸೆಳೆತಕ್ಕೆ ರೈತ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ತಮ್ಮ ಕೃಷಿ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ನದಿಯ ಸೇತುವೆ ಬಳಿ ಕೈ ಕಾಲು ತೊಳೆದುಕೊಳ್ಳಲು ಹೋಗಿರಬಹುದು. ಈ ವೇಳೆ ರೈತ ಸಿದ್ರಾಯಿ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ರೈತ ಕೊಚ್ಚಿ ಹೋಗಿದ್ದನ್ನು ಸ್ಥಳಿಯರು ಮಾತನಾಡಿಕೊಳ್ಳುತ್ತಿರುವುದು ಕಂಡು ಬಂತು.
ಇದನ್ನೂ ಓದಿ :ಅಂಬರ್‌ಗ್ರೀಸ್ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಸ್ಥಳಿಯರು ಜಮಾಯಿಸಿದ್ದು, ಸ್ಥಳಕ್ಕೆ ಬೆಳಗಾವಿ ಉಪ ವಿಭಾಗಾಧಿಕಾರಿ ಸೇರಿದಂತೆ ಕಾಕತಿ ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ, ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಕುರುಹು ಕಂಡು ಬಂದಿಲ್ಲ. ರಾತ್ರಿ ಆಗುತ್ತಿದ್ದಂತೆ ಕಾರ್ಯಾಚರಣೆಗೆ ಅಡಚಣೆ ಆಗಿದೆ. ಶನಿವಾರ ಮತ್ತೆ ಕಾರ್ಯಾಚರಣೆ ನಡೆಯಲಿದೆ.