ಬಂಗಾರಪೇಟೆ: ಪಟ್ಟಣದಲ್ಲಿ ಪುರಸಭೆ ತೀವ್ರ ನಿರ್ಲಕ್ಷ್ಯತೆಯಿಂದ ಮಳೆ ನೀರು ಚರಂಡಿಗಳಲ್ಲಿ ಹರಿಯದೇ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಯಾಗುತ್ತಿದ್ದರೂ ಕೇಳುವವರೇ ಇಲ್ಲ ದಂತಾಗಿದೆ.
ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯ ಮೇಲೆ ನೀರು ಹರಿಯುವ ಪರಿಸ್ಥಿತಿ ಎದುರಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ 27 ವಾರ್ಡುಗಳಿದ್ದು, ಒಳಚರಂಡಿ ವ್ಯವಸ್ಥೆ ಸೂಕ್ತವಾಗಿಲ್ಲ. ಒಳಚರಂಡಿಯಿದ್ದರೂ ಹೂಳು ತುಂಬಿ ಹಾಳಾಗಿದೆ. ಇದರಿಂದ ಗುರುವಾರ ರಾತ್ರಿ ಸುರಿದ ಮಳೆಯಿಂದ ನೀರು ರಸ್ತೆಯ ಮೇಲೆ ಹರಿದು ಬಸ್ ನಿಲ್ದಾಣದ ಬಳಿ ಅಂಗಡಿ ಮಳಿಗೆಗಳಿಗೆ ನುಗ್ಗಿದೆ. ಪುರಸಭೆಯಿಂದ ಕನಿಷ್ಠ 2 ವರ್ಷಕ್ಕೂ ಚರಂಡಿಗಳಲ್ಲಿ ಹೂಳು ತೆಗೆಯುತ್ತಿಲ್ಲ ಇದರಿಂದ ಅವಾಂತರ ಸೃಷ್ಟಿಯಾಗಿದೆ.
ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆಗಳು ತೀವ್ರವಾಗಿ ಹದೆಗೆಟ್ಟಿವೆ. ಅಲ್ಲಲ್ಲಿ ಕಾಮಗಾರಿಗಳನ್ನು ಪ್ರಾರಂಭ ಮಾಡಿ ಅರ್ಧಕ್ಕೆ ನಿಂತಿವೆ. ಕೆಲವು ಕಡೆ ಮಳೇ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯ ಮೇಲೆ ಮಿನಿ ಗುಂಡಿಗಳು ನಿರ್ಮಾಣವಾಗಿದೆ. ಚರಂಡಿ ನಿರ್ಮಾಣ ಮಾಡದೇ ಹಾಗೇ ಬಿಟ್ಟಿರುವ ಕಾರಣ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ. ಪುರಸಭೆ ಆಡಳಿತ ಮಂಡಳಿ ಆಡಳಿತ ವೈಫಲ್ಯದಿಂದ ಕೂಡಿದ್ದು, ನಾಲ್ಕು ತಿಂಗಳಾದರೂ ಸಭೆ ಕೆರಯುತ್ತಿಲ್ಲ. ಪಟ್ಟಣದಲ್ಲಿ ಆಕಸ್ಮಿಕವಾಗಿ ಎದುರಾಗುವ ಸಮಸ್ಯೆಗೆ ಕ್ರಮವಹಿಸುತ್ತಿಲ್ಲ. ಹೀಗಾಗಿ ಪಟ್ಟಣದಲ್ಲಿ ಸಮಸ್ಯೆಗಳು ಹೆಚ್ಚಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ಬಸ್ ನಿಲ್ದಾಣದ ಕಾರೋನೇಷನ್ ರಸ್ತೆಯಲ್ಲಿ ಗುರುವಾರ ರಾತ್ರಿ ಸುರಿದ ಮಳೆ ಯಿಂದಾಗಿ ಚರಂಡಿಗಳಲ್ಲಿ ನೀರು ಹರಿದಿದ್ದು, ತುರ್ತು ಕ್ರಮ ಕೈಗೊಳ್ಳಲಾಗುವುದು. ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ರಸ್ತೆ ಮೇಲೆ ಮಳೆ ನೀರು ಹರಿದಿದೆ. ಪುರಸಭೆ ಆಡಳಿತ ಗಮನಕ್ಕೆ ತಂದು ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲಾಗುವುದು.
– ಜಿ.ಎನ್.ಚಲಪತಿ, ಮುಖ್ಯಾಧಿಕಾರಿ, ಪುರಸಭೆ
ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಕಾರೋನೇಷನ್ ರಸ್ತೆಯಲ್ಲಿ ನೀರು ಹರಿಯದೇ ರಸ್ತೆ ಮೇಲೆ ಹರಿದು ಜನಸಾಮಾನ್ಯರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕೂಡಲೇ ಅಧಿಕಾರಿ ಸಿಬ್ಬಂದಿಯನ್ನು ಈ ಸ್ಥಳಕ್ಕೆ ಕಳುಹಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು
. – ಫರ್ಜಾನಾ ಸುಹೇಲ್, ಅಧ್ಯಕ್ಷರು, ಪುರಸಭೆ.
– ಎಂ.ಸಿ.ಮಂಜುನಾಥ್