ಮಹಾನಗರ: ಪೂರ್ವ ಮುಂಗಾರು ಬಿರುಸು ಪಡೆದಿದ್ದು, ಮಂಗಳೂರು ನಗರದಲ್ಲಿ ರವಿವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಭಾರೀ ಮಳೆಯ ಪರಿಣಾಮ ನಗರದ ಕೆಲವೊಂದು ತಗ್ಗು ಪ್ರದೇಶಗಳು ಕೃತಕ ನೆರೆಯಿಂದ ಆವರಿಸಿತ್ತು.
ನಗರದಲ್ಲಿ ಶನಿವಾರ ಮಳೆ ತುಸು ಬಿಡುವು ನೀಡಿತ್ತು. ರವಿವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಸುರಿದ ಬಿರುಸಿನ ಮಳೆಗೆ ಹಲವು ಕಡೆಗಳಲ್ಲಿ ಕೃತಕ ನೆರೆ ಆವರಿಸಿತ್ತು.
ನಗರದ ಎಂ.ಜಿ. ರಸ್ತೆ, ಕೊಡಿಯಾಲಬೈಲ್, ಮಹಾಕಾಳಿಪಡ್ಪು, ರಾವ್ ಆ್ಯಂಡ್ ರಾವ್ ವೃತ್ತ, ಸುಭಾಷ್ ನಗರ, ಪಾಂಡೇಶ್ವರ ಸಹಿತ ವಿವಿಧ ಕಡೆಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿತ್ತು. ಕೆಲವು ಕಡೆ ಮ್ಯಾನ್‌ಹೋಲ್‌ನಿಂದ ಗಲೀಜು ನೀರು ರಸ್ತೆಗೆ ಚಿಮ್ಮುತ್ತಿತ್ತು. ನಗರದಲ್ಲಿ ಜಲಸಿರಿ, ಗೈಲ್ ಗ್ಯಾಸ್ ಪೈಪ್ ಲೈನ್, ಸ್ಮಾರ್ಟ್‌ಸಿಟಿ, ಪಾಲಿಕೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಭಾರೀ ಮಳೆಯ ಪರಿಣಾಮ ನಗರದ ಕೆಲವು ಕಡೆಗಳಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ಕಡೆ ಕಾಮಗಾರಿ ಪ್ರಗತಿಯಲ್ಲಿರುವ ಪ್ರದೇಶ ದಲ್ಲಿಯೂ ನೀರು ನಿಂತಿತ್ತು. ನಗರದ ಬಹುತೇಕ ಕಡೆಗಳಲ್ಲಿ ರಾಜಕಾಲುವೆಯಿಂದ ಹೂಳು ತೆಗೆದು ಬಳಿಕ ಅಲ್ಲೇ ಮೇಲ್ಗಡೆ ರಾಶಿ ಹಾಕಲಾಗಿದೆ. ಭಾರೀ ಮಳೆಗೆ ಹೂಳು ಮತ್ತೆ ರಾಜಕಾಲುವೆಗೆ ಬೀಳುತ್ತಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮ ರಸ್ತೆಯಲ್ಲೇ ನೀರು ನಿಂತು ಅವಾಂತರಕ್ಕೆ ಕಾರಣವಾಗುತ್ತಿದೆ.