Advertisement
ರಾಯಚೂರು ತಾಲೂಕಿನ ನಡುಗಡ್ಡೆ ಪ್ರದೇಶ ಕುರುಪುರದ ಒಂದೇ ಕುಟುಂಬದ ಸುಮಲತಾ (35), ಮಗಳು ರೋಜಾ (6), ನರಸಮ್ಮ ರಾಮುಲು (45), ನರಸಮ್ಮ ನರಸಪ್ಪ (55) ನಾಪತ್ತೆಯಾದವರು. ಇವರು ತೆಲಂಗಾಣದ ಪಂಚಾದಿಪಾಡಕ್ಕೆ ದಿನಬಳಕೆ ವಸ್ತುಗಳ ಖರೀದಿಗೆ ತೆಪ್ಪದಲ್ಲಿ ಹೋಗಿದ್ದರು. ಹಿಂದಿರುಗುವಾಗ ತೆಪ್ಪದಲ್ಲಿ 13 ಜನ ಇದ್ದು, ಭಾರ ಹೆಚ್ಚಾದ ಕಾರಣ ತೆಪ್ಪ ಮುಳುಗಿದೆ. ಈ ವೇಳೆ 9 ಜನ ಈಜಿ ದಡ ಸೇರಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ.
ಮಲಪ್ರಭಾ ನದಿಯ ಪ್ರವಾಹದಿಂದಾಗಿ ರಾಮದುರ್ಗ ತಾಲೂಕಿನ ಹಿರೇ ಹಂಪಿಹೊಳಿ ಮತ್ತು ಚಿಕ್ಕಹಂಪಿಹೊಳಿ ಗ್ರಾಮಗಳ ಜನರು ತೊಂದರೆಗೆ ಈಡಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 51 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.77 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ಇದರಿಂದಾಗಿ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ. ರೋಣ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ಹೊಳೆಆಲೂರಿನಲ್ಲಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು ಸೇತುವೆ ಮುಳುಗಡೆಯಾಗಿದೆ.
Related Articles
ಕೃಷ್ಣೆಯ ಉಗಮ ಸ್ಥಾನ ಮತ್ತು ಉಪ ನದಿಗಳ ಜಲಾನಯನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯದಿಂದ 2.50 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಸೋಮವಾರ ಸಂಜೆ 106.172 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,50,472 ಕ್ಯುಸೆಕ್ ಒಳಹರಿವಿದ್ದು 2.50 ಲಕ್ಷ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
Advertisement