ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಉತ್ತಮ ಗಾಳಿ ಸಹಿತ ಬಿರುಸಾದ ಮಳೆಯಾಗುತ್ತಿರುವ ಪರಿಣಾಮ ನದಿ ನೀರು ಏರಿಕೆಯಾಗಿದ್ದು, ತೋಟಗಳಿಗೆ ನೀರು ನುಗ್ಗಿರುವುದು ಸಹಿತ ರಾಷ್ಟ್ರೀಯ ಹೆದ್ದಾರಿ ಮುಂಡಾಜೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತಡೆಯಾಯಿತು.
ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಏರಿಕೆಯಾಗಿದ್ದು, ಶನಿವಾರ ಹಾಗೂ ಇಂದು (ಭಾನುವಾರ) ಎಡೆಬಿಡದೆ ಮಳೆ ಸುರಿಯಲಾರಂಬಿಸಿದೆ. ತೆಂಗು, ಅಡಿಕೆ ಮರ ಸಹಿತ ಮರಗಳು ಅಲ್ಲಲ್ಲಿ ಧರೆಗುರುಳಿ ಹಾನಿ ಸಂಭವಿಸಿದೆ.
ಪಡಂಗಡಿ ಗ್ರಾಮದ ರಿಚರ್ಡ್ ಅವರ ಮನೆಗೆ ಗುಡ್ಡ ಕುಸಿದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಇಂದಬೆಟ್ಟು ಗ್ರಾಮದ ಜಾಕೋಬ್ ಮೊನಿಸ್ ವಾಸ್ತವ್ಯದ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಗೋಡೆ ಬಿರುಕು ಬಿಟ್ಟಿದೆ. ಮೊಗ್ರು ಗ್ರಾಮದ ಪರಕ್ಕಾಜೆ ಎಂಬಲ್ಲಿ ಶೀನಪ್ಪ ಗೌಡ ರವರ ಮನೆಯ ಪಕ್ಕದಲ್ಲಿರುವ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ. ಮಾಲಾಡಿ ಗ್ರಾಮದ ಅಶೋಕ್ ಶೆಣೈ ಮನೆಯ ಕಂಪೌಂಡ್ ಬಿದ್ದು ಸಮಸ್ಯೆ ಎದುರಾಗಿದೆ. ಪಜಿರಡ್ಕದಲ್ಲಿ ಎಸ್.ಸಿ ಕಾಲೋನಿ ಶಂಕರರವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾದ ಘಟನೆ ಸಂಭವಿಸಿದೆ. ಪಡಂಗಡಿ ಬಾಬು ರವರ ದನದ ಹಟ್ಟಿಯ ಶೀಟ್ ಗಾಳಿಗೆ ಹಾರಿಹೋಗಿದೆ ಹಾಗೂ ಕಲ್ಯಾಣಿಯವರ ಕೊಟ್ಟಿಗೆಗೆ ಗಾಳಿ ಮಳೆಯಿಂದ ತೊಂದರೆಯಾಗಿದೆ.
ಬಳಂಜ ಗ್ರಾ.ಪಂ. ವ್ಯಾಪ್ತಿಯ ನಾಲ್ಕೂರು ಗ್ರಾಮದ ಕಂರ್ಬಿತ್ತಿಲ್ ಶೇಖರ್ ಶೆಟ್ಟಿಯವರ ಹೊಸಮನೆಗೆ ಗುಡ್ಡ ಕುಸಿದು ಹಾನಿಯಾಗಿದೆ. ಮಾಲಾಡಿ ಜನತಾ ಕಾಲೋನಿ ಶಕುಂತಾಳರವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ. ವೇಣೂರಿನಲ್ಲಿ ಮೈಮುನಾ ರವರ ಮನೆಗೆ ಮರ ಬಿದ್ದು ಹಂಚು ಹಾನಿಯಾಗಿದೆ. ಸೋಣಂದೂರು ಗ್ರಾಮದ ಸಬರಬೈಲು ಅಣ್ಣಿ ಮೂಲ್ಯರ ಶೌಚಾಲಯದ ಗೋಡೆ ಕುದಿದು ಬಿದ್ದಿದೆ. ಮಿತ್ತಬಾಗಿಲು ಗ್ರಾಮದ ಕೆ. ಅಬೂಬಕ್ಕರ್ ರವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಗಾಳಿ ಮಳೆಗೆ ಕುಸಿದು ಬಿದ್ದು ಮನೆಯು ಹಾನಿಗೊಂಡಿರುತ್ತದೆ.
ಗ್ರಾಮಾಂತರ ಪ್ರದೇಶದ ಹಲವು ಕಡೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು ನೀರು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಸೂಳಬೆಟ್ಟು ಪಲ್ಗುಣಿ ನದಿಯ ಪಕ್ಕ ಅಡಿಕೆ ತೋಟಗಳಿಗೆ ನೀರು ನುಗ್ಗಿ ನಷ್ಟ ಉಂಟಾಗಿದೆ. ಪೆರಾಡಿ ಗ್ರಾಮದ ಪಂಬುದೊಟ್ಟು ಎಂಬಲ್ಲಿ ತೋಡಿನ ನೀರು ಪಕ್ಕದ ಗದ್ದೆ ಮತ್ತು ತೋಟಕ್ಕೆ ನುಗ್ಗಿ ರೈತರಿಗೆ ವ್ಯಾಪಕ ನಷ್ಟ ಉಂಟಾಗಿದೆ.
ಹಚ್ಚಾಡಿ, ಕೊಪ್ಪದ ಗಂಡಿ ಕಿಲ್ಲೂರು ಸಂಪರ್ಕ ಸೇತುವೆ ಹಾಗೂ ಇತರ ನದಿಗಳಲ್ಲಿ ನೀರಿನ ಮಟ್ಟ ಹೆಚ್ವಿದೆ. ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ನೀರಿನ ಹರಿವು ಹೆಚ್ಚಾಗಿದೆ.