ಅಳ್ನಾವರ: ಸತತ ಮಳೆಗೆ ಸಮೀಪದ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಮತ್ತೆ ಉಕ್ಕಿ ಹರಿಯುತ್ತಿದ್ದು, ಅಪಾಯದ ಮುನ್ಸೂಚನೆ ಎದುರಾಗಿದೆ. ಕಳೆದೆರಡು ತಿಂಗಳ ಹಿಂದೆ ಜನತೆಯಲ್ಲಿ ಉಂಟಾಗಿದ್ದ ಆತಂಕ ಮತ್ತು ಅಪಾಯದ ಕಹಿ ಅನುಭವವನ್ನು ಮರೆಯುವ ಮೊದಲೇ ಮತ್ತೂಮ್ಮೆ ವರುಣ ತನ್ನ ಆರ್ಭಟ ಶುರು ಮಾಡಿದ್ದು, ಒಂದೆರಡು ದಿವಸಗಳಿಂದ ಸುರಿಯುತ್ತಿರುವ ಹಿಂಗಾರು ಮಳೆ ಭಯ ಹುಟ್ಟಿಸಿದೆ. ಆಗಸ್ಟ್‌ನಲ್ಲಿ ಹುಲಿಕೇರಿ ಕೆರೆ ತುಂಬಿ ಒಡೆಯುವ ಭೀತಿಯಲ್ಲಿಯೇ ಜನ ಹಗಲಿರುಳು ಕಾಲ ಕಳೆಯುವಂತಾಯಿತು.
ಅಳ್ನಾವರ ಪಟ್ಟಣದ ಕೆಲವೊಂದು ಬಡಾವಣೆಯ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಅಂದಿನ ಭಯದ ವಾತಾವರಣ ಮತ್ತೂಮ್ಮೆ ಎದುರಾಗುವ ಸ್ಥಿತಿ ನಿರ್ಮಾಣವಾಗಿದ್ದು, ಕೆರೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಕೆರೆಯ ಕೋಡಿ ತುಂಬಿ ಹರಿದು ಗೋಡೆ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದಾಗ ಮಳೆ ನಿಂತಿದ್ದರಿಂದ ಜನರು ಆತಂಕದಿಂದ ಹೊರಗೆ ಬಂದಿದ್ದರು. ಈಗ ಪುನಃ ಕೋಡಿ ತುಂಬಿ ಹರಿಯುತ್ತಿರುವುದರಿಂದ ಒಡೆಯುವ ಕೊನೆಯ ಹಂತದಲ್ಲಿರುವ ಗೋಡೆ ಕುಸಿಯುವ ಸಂಭವ ಹೆಚ್ಚಾಗಿದೆ. ನೀರಿನ ರಭಸವನ್ನು ತಡೆಯಲು ಗೋಡೆಯ ಹಿಂಬದಿಯಲ್ಲಿ ಮಣ್ಣು ತುಂಬಿದ ಚೀಲಗಳನ್ನು ಇಡಲಾಗಿದೆ.
ಆದರೂ ಅದನ್ನು ಮೀರಿ ನೀರು ಎತ್ತರಕ್ಕೆ ಬಂದಿರುವುದರಿಂದ ಮತ್ತೇನೋ ಅಪಾಯ ಕಾದಿದೆ ಎನ್ನುವ ವಾತಾವರಣ ಜನರಲ್ಲಿ ಮೂಡಿದೆ. ಗೋಡೆಯ ಕೆಳ ಭಾಗದಲ್ಲಿ ಭೂಮಿ ಸಡಿಲಗೊಂಡಿದ್ದು ಯಾವುದೇ ಸಮಯದಲ್ಲಿ ಕುಸಿಯಬಹುದಾಗಿದೆ. ಈಡೇರದ ಭರವಸೆ: ಆಗಸ್ಟ್ ತಿಂಗಳಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಹುಲಿಕೇರಿಗೆ ಭೇಟಿ ಕೊಟ್ಟಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ
ಜಗದೀಶ ಶೆಟ್ಟರ, ಶಾಸಕ ಸಿ.ಎಂ. ನಿಂಬಣ್ಣವರ ಜಿಲ್ಲಾಧಿಕಾರಿ ದೀಪಾ ಚೋಳನ್ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಸನ್ನದ್ಧವಾಗಿದೆ. ಮಳೆ ನಿಂತ ಮೇಲೆ ಕೆರೆಯ ಸಂಪೂರ್ಣ ಸುಧಾರಣೆಗೆ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇನ್ನುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎನ್ನುವ ಮಾಹಿತಿ ದೊರೆತಿದೆ.
ಮುನ್ನೆಚ್ಚರಿಕೆ: ಮಳೆ ಮೂನ್ಸೂಚನೆ ಅರಿತ ನೀರಾವರಿ ಇಲಾಖೆ ಅಧಿಕಾರಿಗಳು ಇಂದಿರಮ್ಮನ ಕೆರೆಯ ಗೇಟ್ ಗಳನ್ನು ತೆರೆದಿದ್ದು, ನೀರು ಹೊರಗೆ ಬಿಡಲಾಗುತ್ತಿದೆ. ಆದರೂ ಕೆರೆಯಲ್ಲಿ ಹಿನ್ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ಭಾಗದ ಸುತ್ತಲಿನ ಪ್ರದೇಶಗಳಲ್ಲಿ ಸತತವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳೆಲ್ಲ ತುಂಬಿಕೊಂಡು ಅಪಾಯದ ಮಟ್ಟ ತಲುಪಿವೆ.
ಎಲ್ಲೆಡೆ ಮಳೆ ಮತ್ತೆ ಪ್ರಾರಂಭವಾಗಿದ್ದು ನಾಗರಿಕರು ಅದರಲ್ಲೂ ಮುಖ್ಯವಾಗಿ ಹಳ್ಳ ಮತ್ತು ಕೆರೆಯ ಅಕ್ಕಪಕ್ಕದಲ್ಲಿ ವಾಸಿಸುವವರು ಜಾಗರೂಕರಾಗಿರಬೇಕು. ಅ ಧಿಕಾರಿಗಳು ಪರಿಸ್ಥಿತಿ ಮೇಲೆ ನಿಗಾ ಇಟ್ಟು ಯಾವುದೇ ತುರ್ತು ಸಂದರ್ಭದಲ್ಲಿಯೂ ಕಾರ್ಯ ಪ್ರವೃತ್ತರಾಗಲಿದ್ದು, ಜನರು ಭಯ ಪಡುವ ಅಗತ್ಯವಿಲ್ಲ. ಹಿಂದಿನ
ಮಳೆಯಿಂದ ಹಾನಿಗೊಳಗಾದ ರಸ್ತೆಗಳು, ಸೇತುವೆಗಳ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಾನಿಗೊಳಗಾದರೈತರಿಗೂ ಹೆಚ್ಚಿನ ಪರಿಹಾರ ಕೊಡಿಸಲು ಒತ್ತಾಯಿಸುತ್ತೇನೆ.
– ಸಿ.ಎಂ. ನಿಂಬಣ್ಣವರ, ಶಾಸಕ